– ಕೊನೆಯವರೆಗೂ ಕ್ರೀಸ್‌ಗೆ ಇಳಿಯದ ಕ್ಯಾಪ್ಟನ್ ಸೂರ್ಯ
ಅಬುಧಾಬಿ: ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಓಮನ್ ವಿರುದ್ಧ ಭಾರತ 21 ರನ್‌ಗಳ ಗೆಲುವು ಸಾಧಿಸಿದೆ. ಇತ್ತ ತೀವ್ರ ಪ್ರತಿರೋಧ ತೋರಿದ ಒಮನ್ ಹೋರಾಡಿ ಸೋತಿದೆ.
ಅಬುಧಾಬಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಒಮನ್ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ತಂಡದ ನಾಯಕ ಜತಿಂದರ್ ಸಿಂಗ್ 33 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 32 ರನ್, ಅಮೀರ್ ಕಲೀಂ 46 ಎಸೆತಗಳಲ್ಲಿ 2 ಸಿಕ್ಸರ್, 7 ಬೌಂಡರಿ ಸಿಡಿಸಿ 64 ರನ್ ಗಳಿಸಿದರು. ಹಮ್ಮದ್ ಮಿರ್ಜಾ 33 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿ ಸಿಡಿಸಿ ತಂಡಕ್ಕೆ 51 ರನ್‌ಗಳ ಕೊಡುಗೆ ನೀಡಿದರು. ವಿನಾಯಕ್ ಶುಕ್ಲಾ ಕೇವಲ 2 ಎಸೆತಗಳಿಗೆ 1 ರನ್ ನೀಡಿ ವಿಕೆಟ್ ಒಪ್ಪಿಸಿದರು.
ಭಾರತದ ಪರ ಹಾರ್ದಿಕ್ ಪಾಂಡ್ಯ, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಿಡಿಸಿ 38 ರನ್‌ಗಳ ಉತ್ತಮ ಆರಂಭ ನೀಡಿದರು. ಶುಭಮನ್ ಗಿಲ್ 5 ರನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 56 ರನ್ ಸಿಡಿಸಿದರು. ನಂತರ ಅಕ್ಷರ್ ಪಟೇಲ್ 13 ಎಸೆತಗಳಲ್ಲಿ 26 ರನ್, ತಿಲಕ್ ವರ್ಮಾ 18 ಎಸೆತಗಳಲ್ಲಿ 29 ರನ್‌ಗಳ ಕೊಡುಗೆ ನೀಡಿದರು. ಹರ್ಷಿತ್ ರಾಣಾ 8 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 13 ರನ್‌ಗಳಿಸಿ ಔಟಾಗದೇ ಉಳಿದರು.
ಕ್ರೀಸ್‌ಗಿಳಿಯದ ಕ್ಯಾಪ್ಟನ್
ಇನ್ನೂ ಒಮನ್ ವಿರುದ್ಧ ನಡೆದ ಪಂದ್ಯವನ್ನು ಭಾರತ ಅಭ್ಯಾಸ ಪಂದ್ಯದಂತೆ ಪರಿಗಣಿಸಿತು. ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಬದಲಾವಣೆ ಮಾಡಿಕೊಂಡಿತು. ಗಿಲ್, ಅಭಿ ಎಂದಿನಿಂತೆ ಆರಂಭಿಕರಾಗಿ ಕಣಕ್ಕಿಳಿದರೆ, ಸಂಜು ಸ್ಯಾಮ್ಸನ್ 3ನೇ ಕ್ರಮಾಂಕ, ಹಾರ್ದಿಕ್ ಪಾಂಡ್ಯ ನಾಲ್ಕು ಹಾಗೂ ಅಕ್ಷರ್ ಪಟೇಲ್ 5ನೇ, ತಿಲಕ್ 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರು. ಕೊನೆಯವರೆಗೆ ಎಲ್ಲ ಆಟಗಾರರಿಗೆ ಬ್ಯಾಟಿಂಗ್‌ಗೆ ಅವಕಾಶ ಮಾಡಿಕೊಟ್ಟ ನಾಯಕ ಸೂರ್ಯ ಕ್ರೀಸ್‌ಗೆ ಬಾರದೇ ಡಗೌಟ್‌ನಲ್ಲೇ ಉಳಿದರು.
ಒಮನ್ ಪರ ಶಾ ಫೈಸಲ್, ಜಿತೆನ್ ರಾಮನಂದಿ ಮತ್ತು ಅಮೀರ್ ಕಲೀಮ್ ತಲಾ ಎರಡು ವಿಕೆಟ್ ಪಡೆದರು.


