– 5ನೇ ಕ್ರಮಾಂಕದ ಬ್ಯಾಟಿಂಗ್‍ನಲ್ಲಿ ರಾಹುಲ್ ಮೈಲುಗಲ್ಲು
– ಕಿವೀಸ್ ವಿರುದ್ಧ ಶತಕ ಸಿಡಿಸಿದ ಭಾರತದ ಮೊದಲ ಕೀಪರ್
– ರೈನಾ ದಾಖಲೆ ಮುರಿದ ಕನ್ನಡಿಗ
ಮೌಂಟ್ ಮಾಂಗನುಯಿ: ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಕೀಪಿಂಗ್‍ನಲ್ಲೂ ಸಖತ್ ಮಿಂಚುತ್ತಿದ್ದಾರೆ. ನ್ಯೂಜಿಲೆಂಡ್ ಪ್ರಸಾದ ಟಿ20 ಹಾಗೂ ಏಕದಿನ ಪಂದ್ಯದಲ್ಲಿ ರಾಹುಲ್ ಮಿಂಚಿದ್ದಾರೆ. ಅದರಲ್ಲೂ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿ ಅನೇಕ ಸಾಧನೆಗಳ ಪಟ್ಟಿಗೆ ಸೇರಿದ್ದಾರೆ.
2019-20ರ ಋತುವಿನಲ್ಲಿ ಕೆ.ಎಲ್.ರಾಹುಲ್ ಭಾರತದ ಪರ ಸೀಮಿತ ಓವರ್‌ಗಳ ಕ್ರಿಕೆಟ್‍ನಲ್ಲಿ ತಂಡದ ಅವಶ್ಯಕತೆಗೆ ಅನುಗುಣವಾಗಿ ವಿವಿಧ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಎಲ್ಲ ಕ್ರಮಾಂಕದಲ್ಲೂ ಕೆ.ಎಲ್.ರಾಹುಲ್ ಅದ್ಭುತ ಬ್ಯಾಟಿಂಗ್‍ನಿಂದ ತಂಡಕ್ಕೆ ಆಸರೆ ಆಗುತ್ತಲೇ ಬಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಭಾರತ ವೈಟ್‍ವಾಶ್‍ಗೆ ತುತ್ತಾಗುವ ಸಂದರ್ಭದ ಅಂಚಿನಲ್ಲಿ ರಾಹುಲ್ ತಮ್ಮ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿ ಚೊಚ್ಚಲ ಏಕದಿನ ಶತಕವನ್ನು ದಾಖಲಿಸಿದರು. ಈವರೆಗೆ ಕೆ.ಎಲ್.ರಾಹುಲ್ ನಾಲ್ಕು ಏಕದಿನ ಶತಕ ಸಿಡಿಸಿದ್ದಾರೆ. ಇದನ್ನೂ ಓದಿ: ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ
Advertisement
Advertisement
ಇಂದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಆಡಿದರು. ಅದರಲ್ಲೂ ಮನೀಶ್ ಪಾಂಡೆ ಹಾಗೂ ಕೆ.ಎಲ್.ರಾಹುಲ್ ಜೋಡಿ ಮೈದಾನದಲ್ಲಿ ಕಮಾಲ್ ಮಾಡಿತು. ಭಾರತದ ಇನ್ನಿಂಗ್ಸ್ ನ 31ನೇ ಓವರಿನಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ 162 ರನ್ ಗಳಿಸಿತ್ತು. ಬಳಿಕ ಕೆ.ಎಲ್.ರಾಹುಲ್‍ಗೆ ಮನೀಶ್ ಪಾಂಡೆ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 107 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಕೆ.ಎಲ್.ರಾಹುಲ್ 112 ರನ್ (113 ಎಸೆತ, 9 ಬೌಂಡರಿ ಹಾಗೂ 2 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು.
Advertisement
ರಾಹುಲ್ 112 ರನ್:
ಏಷ್ಯಾದ ಹೊರಗಿನ ನೆಲದಲ್ಲಿ ಶತಕ ಸಿಡಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಎಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ. 1999ರ ವಿಶ್ವಕಪ್ ಟೂರ್ನಿಯ ಭಾಗವಾಗಿ ಟೌಂಟನ್‍ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧ 145ರನ್ ಗಳಿಸಿದ್ದರು. ಇದು ಭಾರತದ ಕೀಪರ್-ಬ್ಯಾಟ್ಸ್‌ಮನ್ ಏಷ್ಯಾದ ಹೊರಗಿನ ನೆಲದಲ್ಲಿ ಮಾಡಿದ ಮೊದಲ ಏಕದಿನ ಶತಕವಾಗಿತ್ತು. ಇದನ್ನೂ ಓದಿ: ಕೆ.ಎಲ್.ರಾಹುಲ್ ‘360 ಡಿಗ್ರಿ’ ಬ್ಯಾಟ್ಸ್‌ಮನ್: ಮಂಜ್ರೇಕರ್
Advertisement
ಕೀಪರ್ ಆಗಿ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಭಾರತೀಯ ಆಟಗಾರರ ದಿಗ್ಗಜರ ಪಟ್ಟಿಗೆ ರಾಹುಲ್ ಸೇರಿದ್ದಾರೆ. ಎಂಎಸ್ ಧೋನಿ 9 ಬಾರಿ ಶತಕ ಹಾಗೂ 73 ಬಾರಿ ಅರ್ಧ ಶತಕ ದಾಖಲಿಸಿದ್ದಾರೆ. ರಾಹುಲ್ ದ್ರಾವಿಡ್ ಕೀಪರ್ ಆಗಿ 4 ಶತಕ ಬಾರಿದ್ದಾರೆ. ಈ ಪಟ್ಟಿಗೆ ರಾಹುಲ್ ಎಂಟ್ರಿ ಕೊಟ್ಟಿದ್ದು, ದಾಖಲೆಯ ನಿರೀಕ್ಷೆ ಹೆಚ್ಚಿಸಿದ್ದಾರೆ. ಕೊನೆಯದಾಗಿ ಎಂ.ಎಸ್.ಧೋನಿ ಅವರು 2007ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 134 ರನ್ ಗಳಿಸಿದ್ದರು. ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್‍ರನ್ನ ಹೊಗಳಿದ ಸೆಹ್ವಾಗ್
ವಿವಿಧ ದೇಶಗಳಲ್ಲಿ ರಾಹುಲ್ ಶತಕ:
ಕೆ.ಎಲ್.ರಾಹುಲ್ ನಾಲ್ಕು ವಿಭಿನ್ನ ದೇಶಗಳಲ್ಲಿ ಶತಕ ಸಿಡಿಸಿದ್ದಾರೆ. ಜಿಂಬಾಬ್ವೆ, ಇಂಗ್ಲೆಂಡ್, ಭಾರತ ಮತ್ತು ನ್ಯೂಜಿಲೆಂಡ್ ನೆಲದಲ್ಲಿ ಅಂತರರಾಷ್ಟ್ರೀಯ ಏಕದಿನ ಪಂದ್ಯದ ಶತಕ ದಾಖಲಿದ್ದಾರೆ. ವಿವಿಧ ರಾಷ್ಟ್ರಗಳಲ್ಲಿ ಮೊದಲ ನಾಲ್ಕು ಏಕದಿನ ಶತಕಗಳನ್ನು ಗಳಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ತಮ್ಮ ಮೊದಲ ಆರು ಏಕದಿನ ಶತಕಗಳನ್ನು ವಿವಿಧ ದೇಶಗಳಲ್ಲಿ ಸಿಡಿಸಿದ್ದರು. ಅವರು ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಭಾರತ ಹಾಗೂ ಪಾಕಿಸ್ತಾನದಲ್ಲಿ ಶತಕ ಗಳಿಸಿದ್ದರು.
ವಿಶೇಷವೆಂದರೆ ಟೆಸ್ಟ್ ಕ್ರಿಕೆಟ್‍ನಲ್ಲಿ ಕೆ.ಎಲ್.ರಾಹುಲ್ ಎಲ್ಲಾ ಐದು ಶತಕಗಳನ್ನು ಐದು ವಿಭಿನ್ನ ದೇಶಗಳಲ್ಲಿ ದಾಖಲಿಸಿದ್ದಾರೆ. ಅಜಿಂಕ್ಯ ರಹಾನೆ ವಿವಿಧ ದೇಶಗಳಲ್ಲಿ ತಮ್ಮ ಮೊದಲ 5 ಟೆಸ್ಟ್ ಶತಕ ಗಳಿಸಿದ ಏಕೈಕ ಭಾರತೀಯ ಕ್ರಿಕೆಟರ್. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ
ಭಾರತದ ಮೊದಲಿಗ:
ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ನೆಲದಲ್ಲಿ ಕೀವಿಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ 5ನೇ ವಿಕೆಟ್ ಕೀಪರ್ ಹಾಗೂ ಭಾರತದ ಮೊದಲಿಗರಾಗಿದ್ದಾರೆ. ಆ್ಯಡಮ್ ಗಿಲ್‍ಕ್ರಿಸ್ಟ್ 1998 ರಲ್ಲಿ 118 ರನ್ ಮತ್ತು 2000ರಲ್ಲಿ 128 ರನ್, ಬ್ರಾಡ್ ಹ್ಯಾಡಿನ್ 2010ರಲ್ಲಿ 110 ರನ್, ಎಬಿ ಡಿವಿಲಿಯರ್ಸ್ 2012ರಲ್ಲಿ ಔಟಾಗದೆ 106 ರನ್ ಮತ್ತು ಕುಮಾರ್ ಸಂಗಕ್ಕಾರ ಅಜೇಯ 2015ರಲ್ಲಿ 113 ರನ್ ಗಳಿಸಿದ್ದರು. ಈಗ ಕೆ.ಎಲ್.ರಾಹುಲ್ ಈ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಡಿವಿಲಿಯರ್ಸ್ ಮತ್ತು ಕೆ.ಎಲ್.ರಾಹುಲ್ ಮಾತ್ರ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದಾರೆ.
ರೈನಾ ದಾಖಲೆ ಬೀಟ್:
ನ್ಯೂಜಿಲೆಂಡ್ ನೆಲದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ದಾಖಲೆ ಕೆ.ಎಲ್.ರಾಹುಲ್ ಹೆಸರಿಗೆ ಸೇರಿದೆ. ಇಂದಿನ ಪಂದ್ಯದಲ್ಲಿ ರಾಹುಲ್ 112 ರನ್ ಗಳಿಸಿದ್ದಾರೆ. ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 103ರನ್ ಗಳಿಸಿದ್ದರು. ಉಳಿದಂತೆ 2015ರ ವಿಶ್ವಪಕ್ ಟೂರ್ನಿಯ ಭಾಗವಾಗಿ ನ್ಯೂಜಿಲೆಂಡ್‍ನ ಈಡನ್ ಪಾರ್ಕ್ ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಸುರೇಶ್ ರೈನಾ ಅಜೇಯ 103 ರನ್ ದಾಖಲಿಸಿದ್ದರು.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ 112 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಅವರು 2004ರ ಎಸ್‍ಸಿಜಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 139 ರನ್ ಗಳಿಸಿದ್ದರು. 2005ರಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಯುವರಾಜ್ ಜಿಂಬಾಬ್ವೆ ವಿರುದ್ಧ 120 ರನ್ ಗಳಿಸಿದ್ದರು. ಇದನ್ನೂ ಓದಿ: ನನಗೂ ಕೆ.ಎಲ್.ರಾಹುಲ್‌ಗೂ ಸಂಬಂಧವಿಲ್ಲ, ಬೇಕಿದ್ರೆ ಮಗಳನ್ನ ಕೇಳಿಕೊಳ್ಳಿ- ಸುನಿಲ್ ಶೆಟ್ಟಿ
2010ರಿಂದ ಇಲ್ಲಿಯವರೆಗೆ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಆಗಿದ್ದಾರೆ. ಇಂದಿನ ಪಂದ್ಯದಲ್ಲಿ ರಾಹುಲ್ 112 ರನ್ ಹೊಡೆದಿದ್ದಾರೆ. ಎಂ.ಎಸ್.ಧೋನಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 134 ರನ್ ಗಳಿಸಿದ್ದರು.
5ನೇ ಕ್ರಮಾಂಕದಲ್ಲಿ ರಾಹುಲ್ ಕಮಾಲ್:
ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ 88 ರನ್, ಎರಡನೇ ಪಂದ್ಯದಲ್ಲಿ 4 ರನ್ ಹಾಗೂ ಮೂರನೇ ಪಂದ್ಯದಲ್ಲಿ 112 ರನ್ ಸೇರಿ ಒಟ್ಟು 204 ರನ್ ಗಳಿಸಿದ್ದಾರೆ. ಈ ಮೂಲಕ ರಾಹುಲ್ ಏಷ್ಯಾದ ಹೊರಗಿನ ದೇಶದಲ್ಲಿ ನಡೆದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ 2ನೇ ಭಾರತೀಯರಾಗಿದ್ದಾರೆ. 2011ರಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ನಡೆದಿದ್ದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ 257 ರನ್ ಗಳಿಸಿದ್ದರು.