Connect with us

Cricket

ವಿಕೆಟ್ ಪಡೆದು ವಿರಾಟ್‍ಗೆ ಸೆಲ್ಯೂಟ್ ಹೊಡೆದ ಬಾಂಗ್ಲಾ ಬೌಲರ್

Published

on

ಕೋಲ್ಕತ್ತಾ: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದ ಬಾಂಗ್ಲಾದೇಶ ಬೌಲರ್ ಸೆಲ್ಯೂಟ್ ಹೊಡೆದಿದ್ದಾರೆ.

ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧದ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದ್ದು, ಗೆಲುವು ಸಾಧಿಸುವುದಕ್ಕೆ 4 ವಿಕೆಟ್ ಬೇಕಿದೆ. ವಿರಾಟ್ ಕೊಹ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 300 ಗಡಿ ದಾಟಿಸಿದರು. ಚೇತೇಶ್ವರ ಪೂಜಾರ 55 ರನ್, ಅಜಿಂಕ್ಯಾ ರಹಾನೆ 51 ಹಾಗೂ ವಿರಾಟ್ ಕೊಹ್ಲಿ 136 ರನ್‍ಗಳ ಸಹಾಯದಿಂದ ಟೀಂ ಇಂಡಿಯಾ 9 ವಿಕೆಟ್ 347 ರನ್ ಸಿಡಿ ಡಿಕ್ಲೇರ್ ಘೋಷಿಸಿತು.

ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. ಇನ್ನಿಂಗ್ಸ್ ನ 80 ಓವರ್‌ನ ಎರಡನೇ ಎಸೆತವನ್ನು ಕೊಹ್ಲಿ ಬೌಂಡರಿಗೆ ಅಟ್ಟಲು ಹೋಗಿ ತೈಜುಲ್ ಇಸ್ಲಾಮ್‍ಗೆ ಕ್ಯಾಚ್ ಒಪ್ಪಿಸಿದರು. ವಿರಾಟ್ ಕೊಹ್ಲಿ 194 ಎಸೆತಗಳಲ್ಲಿ 18 ಬೌಂಡರಿ ಸೇರಿ 136 ರನ್ ಗಳಿಸಿ ಔಟಾದರು. ವಿರಾಟ್ ವಿಕೆಟ್ ಕಿತ್ತ ಸಂಭ್ರಮದಲ್ಲಿ ಬಾಂಗ್ಲಾ ತಂಡ ಇತ್ತು. ಈ ವೇಳೆ ನಗುತ್ತಲೇ ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ಕೊಹ್ಲಿಗೆ ಬಾಂಗ್ಲಾದೇಶದ ಬೌಲರ್ ಇಬಾದತ್ ಹುಸೈನ್ ಸೆಲ್ಯೂಟ್ ಹೊಡೆದಿದ್ದಾರೆ.

ಶನಿವಾರ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶವು ಎರಡನೇ ದಿನದಾಟದ ಅಂತ್ಯಕ್ಕೆ 32.3 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ, ಭಾನುವಾರಕ್ಕ ಬ್ಯಾಟಿಂಗ್ ಮುಂದುವರಿಸಿದೆ.

ವಿರಾಟ್ ದಾಖಲೆ:
ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್‌ನಲ್ಲಿ ಶತಕ ಗಳಿಸಿದ ವಿಶ್ವದ 16ನೇ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಪಾಕಿಸ್ತಾನದ ಅಜರ್ ಅಲಿ ಡೇ-ನೈಟ್ ಟೆಸ್ಟ್ ಇತಿಹಾಸದಲ್ಲಿ ಮೊದಲ ಶತಕವನ್ನು ಗಳಿಸಿದ್ದರು. ಅವರು ಅಕ್ಟೋಬರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 302 ರನ್ ಗಳಿಸಿದ್ದರು. ಪಾಕಿಸ್ತಾನದ ಅಸಾದ್ ಶಫೀಕ್ ಮಾತ್ರ ಪಿಂಕ್ ಬಾಲ್ ಟೆಸ್ಟ್‍ನಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ.

ಡೇ-ನೈಟ್ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ತಮ್ಮ 32ನೇ ರನ್ ಪೂರ್ಣಗೊಳಿಸಿದ ಕೂಡಲೇ ಅವರು ಟೆಸ್ಟ್ ನಲ್ಲಿ ನಾಯಕನಾಗಿ 5,000 ರನ್‍ಗಳನ್ನು ಪೂರ್ಣಗೊಳಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮತ್ತು ವಿಶ್ವದ ಆರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಅಲನ್ ಬಾರ್ಡರ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಕ್ಲೈವ್ ಲಾಯ್ಡ್, ವೆಸ್ಟ್ ಇಂಡೀಸ್‍ನ ಸ್ಟೀಫನ್ ಫ್ಲೆಮಿಂಗ್ ಇದ್ದಾರೆ. ಈ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ನಾಯಕನಾಗಿ 62.88 ಸರಾಸರಿಯಲ್ಲಿ 52 ಟೆಸ್ಟ್ ಪಂದ್ಯಗಳಲ್ಲಿ 4,968 ರನ್ ಗಳಿಸಿದ್ದರು. ಮಹೇಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ 3,454 ರನ್ ಗಳಿಸಿದ್ದು, ನಾಯಕನಾಗಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 109 ಟೆಸ್ಟ್ ಪಂದ್ಯಗಳಲ್ಲಿ 8,659 ರನ್ ಗಳಿಸಿ ನಾಯಕನಾಗಿ ಅತಿ ಹೆಚ್ಚು ರನ್‍ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲನ್ ಬಾರ್ಡರ್ 93 ಪಂದ್ಯಗಳಲ್ಲಿ 6,623 ರನ್ ಗಳಿಸಿ ಎರಡನೇ ಹಾಗೂ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 77 ಪಂದ್ಯಗಳಲ್ಲಿ 6,542 ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

Click to comment

Leave a Reply

Your email address will not be published. Required fields are marked *