ನಾಗ್ಪುರ: ಮೂರನೇ ಟಿ-20 ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿದ್ದು, ಬಾಂಗ್ಲಾದೇಶಕ್ಕೆ 175 ರನ್‍ಗಳ ಗುರಿಯನ್ನು ನೀಡಲಾಗಿದೆ.
ನಾಗ್ಪುರದಲ್ಲಿ ಭಾನುವಾರ ನಡೆಯುತ್ತಿರುವ ಟಿ-20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮಾಡಿದೆ. ಕೆ.ಎಲ್.ರಾಹುಲ್ 52 ರನ್, ಶ್ರೇಯಸ್ ಅಯ್ಯರ್ ಮೊದಲ ಅರ್ಧಶತಕದೊಂದಿಗೆ 62 ರನ್‍ಗಳ ಸಹಾಯದಿಂದ ಭಾರತವು 5 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ.
Advertisement
Advertisement
ಟಾಸ್ ಗೆದ್ದ ಬಾಂಗ್ಲಾದೇಶವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ನ ಆರಂಭದಲ್ಲಿಯೇ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದರು. ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 6 ಎಸೆಗಳನ್ನು ಎದುರಿಸಿ ಕೇವಲ 2 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.
Advertisement
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‍ಗೆ ಸಾಥ್ ನೀಡಿದ ಕನ್ನಡಿಗ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ, ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಯತ್ನಿಸಿದ್ದ ಶಿಖರ್ ಧವನ್ ಕ್ಯಾಚ್ ನೀಡಿ ಹೊರ ನಡೆದರು. 16 ಎಸೆತಗಳನ್ನು ಎದುರಿಸಿದ ಧವನ್ 4 ಬೌಂಡರಿ ಸೇರಿ 19 ರನ್ ಗಳಿಸಿದರು.
Advertisement
ಕೆ.ಎಲ್.ರಾಹುಲ್‍ಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಕೂಡ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು. ಈ ಜೋಡಿಯು 59 ರನ್ ಕಲೆ ಹಾಕಿತು. ಅರ್ಧ ಶತಕ ಪೂರೈಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಬಾಲ್ ಅನ್ನು ಬೌಂಡರಿಗೆ ಅಟ್ಟಲು ಹೋಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. 35 ಎಸೆತಗಳನ್ನು ಎದುರಿಸಿದ ರಾಹುಲ್ 7 ಬೌಂಡರಿ ಸಿಡಿಸಿ 52 ರನ್ ಗಳಿಸಿ ಔಟಾದರು.
ಹ್ಯಾಟ್ರಿಕ್ ಸಿಕ್ಸ್:
ಇನ್ನಿಂಗ್ಸ್ ನ 15ನೇ ಓವರ್ ಎಸೆದ ಅಫಿಫ್ ಹುಸೇನ್ ಎಸೆದ ಮೊದಲ ಮೂರು ಎಸೆತಗಳನ್ನು ಶ್ರೇಯಸ್ ಅಯ್ಯರ್ ಸಿಕ್ಸ್ ಸಿಡಿಸಿದರು. ಈ ಮೂಲಕ ಈ ಪಂದ್ಯದಲ್ಲಿ ಅಯ್ಯರ್ 5 ಸಿಕ್ಸರ್ ಸಿಡಿಸಿದ್ದಾರೆ. ಆದರೆ ಇನ್ನಿಂಗ್ಸ್ ನ 16ನೇ ಓವರ್ ನ ಮೊದಲ ಎಸೆತದಲ್ಲಿಯೇ ರಿಷಭ್ ಪಂತ್ ವಿಕೆಟ್ ಒಪ್ಪಿಸಿದರು. 9 ಎಸೆತಗಳನ್ನು ಎದುರಿಸಿದ ಪಂತ್ ಕೇವಲ 6 ರನ್ ಗಳಿಸಲು ಶಕ್ತರಾದರು. ಇದೇ ಓವರ್ ನ 5ನೇ ಎಸೆತದಲ್ಲಿ ಅಯ್ಯರ್ ವಿಕೆಟ್ ಒಪ್ಪಿಸಿದರು. 33 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸೇರಿ 62 ರನ್ ಸಿಡಿಸಿ ಔಟಾದರು.
ಮನೀಷ್ ಪಾಂಡೆ ಔಟಾಗದೆ 13 ಎಸೆತಗಳಲ್ಲಿ 3 ಬೌಂಡರಿ ಸೇರಿ 22 ರನ್ ಹಾಗೂ ಶಿವಂ ದುಬೇ ಔಟಾಗದೆ 8 ಎಸೆತಗಳಲ್ಲಿ 9 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ 174 ರನ್ ಪೇರಿಸಿತು.