ಮ್ಯಾಂಚೆಸ್ಟರ್: ಸ್ಟಾರ್ ಬ್ಯಾಟರ್ ಜಾಕೊಬ್ ಬೆಥೆಲ್ ಅವರ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು, ಟೀಂ ಇಂಡಿಯಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟಿನಲ್ಲಿ ಶ್ರೇಯಸ್ ಪಡೆಗೆ ಮತ್ತೊಮ್ಮೆ ಹೀನಾಯ ಸೋಲು ನುಂಗಲಾರದ ತುತ್ತಾಗಿದೆ.
17ನೇ ಓವರ್‌ನಲ್ಲಿ ಬಿಷ್ಣೋಯಿ ಮಾಡಿದ ಎಡವಟ್ಟು
ಒಂದೆಡೆ ವಿಕೆಟ್ ಪಡೆಯುತ್ತಾ 16 ಓವರ್‌ಗಳ ವರೆಗೆ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಕಾಯ್ದುಕೊಂಡಿದ್ದ ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆಯಲ್ಲಿತ್ತು. 16 ಓವರ್‌ಗಳಲ್ಲಿ 142 ರನ್‌ಗಳಿದ್ದಾಗ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದ್ರೆ 17ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ರವಿ ಬಿಷ್ಣೋಯಿ ಬೆಥೆಲ್ ರಿಂದ ಹಿಗ್ಗಾಮುಗ್ಗ ಚಚ್ಚಿಸಿಕೊಂಡರು. 2 ನೋಬಾಲ್, 3 ಸಿಕ್ಸರ್, 1 ಬೌಂಡರಿ, 2 ಡಬಲ್ಸ್ ರನ್ ಅಂತಾ ಒಂದೇ ಓವರ್‌ನಲ್ಲಿ 29 ರನ್ ಚಚ್ಚಿಸಿಕೊಂಡರು. ಇದು ಇಡೀ ಪಂದ್ಯದ ಫಲಿತಾಂಶವನ್ನೇ ಬುಡಮೇಲು ಮಾಡಿತು. ಭಾರತ ಕೂಡ ಗೆಲುವಿನ ನಿರೀಕ್ಷೆಯನ್ನೇ ಕಳೆದುಕೊಂಡಿತು.

ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 190 ರನ್ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿ ಗೆಲುವು ಸಾಧಿಸಿತು.
ಬೆಂಡೆತ್ತಿದ ಬೆಥೆಲ್
ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಶುರು ಮಾಡಿದ ಬೆಥೆಲ್ 10 ಓವರ್ ಕಳೆದ ಬಳಿಕ ಸ್ಫೋಟಕ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದ್ರು. ಕೊನೆಯವರೆಗೂ ಅಜೇಯ ಆಟವಾಡಿದ ಜಾಕೊಬ್ 46 ಎಸೆತಗಳಲ್ಲಿ 76 ರನ್ (5 ಸಿಕ್ಸರ್, 5 ಬೌಂಡರಿ) ಚಚ್ಚಿದರು. ಇದರೊಂದಿಗೆ ನಾಯಕ ಹ್ಯಾರಿ ಬ್ರೂಕ್ 15 ಎಸೆತಗಳಲ್ಲಿ ಸ್ಫೋಟಕ 39 ರನ್, ಟಾಮ್ ಬ್ಯಾಂಟನ್ 32 ಎಸೆತಗಳಲ್ಲಿ 39 ರನ್, ವಿಲ್ ಜಾಕ್ಸ್ 9 ರನ್, ಸ್ಯಾಮ್ ಕರ್ರನ್ 7 ರನ್, ಜೋಫ್ರಾ ಆರ್ಚರ್ 10 ರನ್ ಕೊಡುಗೆ ನೀಡಿದ್ರೆ, ಭಾರತ ವೈಡ್, ನೋಬಾಲ್‌ನಿಂದಲೇ 11 ರನ್ ಹೆಚ್ಚುವರಿಯಾಗಿ ಬಿಟ್ಟುಕೊಟ್ಟಿತು.

ಇನ್ನೂ ಟೀಂ ಇಂಡಿಯಾ ಪರ ಅರ್ಷ್‌ದೀಪ್ ಸಿಂಗ್ 3 ವಿಕೆಟ್ ಕಿತ್ತರೆ ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು. ಇಶಾನ್ ಕಿಶನ್ 49 ರನ್, ಅಭಿಷೇಕ್ ಶರ್ಮಾ 43 ರನ್, ಶ್ರೇಯಸ್ ಅಯ್ಯರ್ 37 ರನ್, ತಿಲಕ್ ವರ್ಮಾ ಸ್ಫೋಟಕ 24 ರನ್, ಸೂರ್ಯವಂಶಿ 14 ರನ್, ದುಬೆ 5 ರನ್, ಅಕ್ಷರ್ ಪಟೇಲ್ 2 ರನ್, ಹರ್ಷಿತ್ ರಾಣಾ 6 ರನ್ ಕೊಡುಗೆ ಗಳಿಸಿದ್ರು.
ಇಂಗ್ಲೆಂಡ್ ಪರ ಸ್ಯಾಮ್ ಕರ‍್ರನ್ 3 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್, ವಿಲ್ ಜಾಕ್ಸ್, ಲಿಯಾಮ್ ದಾವ್ಸನ್ ತಲಾ ಒಂದೊಂದು ವಿಕೆಟ್ ಪಡೆದರು.
