ನವದೆಹಲಿ: ರಷ್ಯಾ ಜೊತೆಗಿನ ಮಾತುಕತೆಯ ವೇಳೆ ಭಾರತ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿ ಸೇರಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.
ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿದರು. ಮಾತುಕತೆಯ ವೇಳೆ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ, ಬಾಹ್ಯಾಕಾಶ ಸಹಕಾರ ಸೇರಿದಂತೆ ಒಟ್ಟು 8 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
Advertisement
ಭಾರತ 5.43 ಶತಕೋಟಿ ಡಾಲರ್(ಅಂದಾಜು 40 ಸಾವಿರ ಕೋಟಿ ರೂ.) ವೆಚ್ಚದಲ್ಲಿ 5 ಎಸ್-400 ಟ್ರಯಂಫ್ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಏನಿದು ವಿಶೇಷ ವಾಯು ರಕ್ಷಣಾ ವ್ಯವಸ್ಥೆ? ಹೇಗೆ ಕೆಲಸ ಮಾಡುತ್ತದೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
Advertisement
Advertisement
ಏನಿದು ಎಸ್-400 ಏರ್ ಟ್ರಯಂಫ್?
ಸುಲಭವಾಗಿ ಒಂದು ವಾಕ್ಯದಲ್ಲೇ ಹೇಳುವುದಾದರೆ ಆಕಾಶದಲ್ಲೇ ಶತ್ರುಗಳನ್ನು ನಿರ್ನಾಮ ಮಾಡುವ ಸಾಮರ್ಥ್ಯ ಇರುವ ವಿಶೇಷ ವಾಯು ರಕ್ಷಣಾ ವ್ಯವಸ್ಥೆ. ಶತ್ರು ರಾಷ್ಟ್ರಗಳು ಕ್ಷಿಪಣಿಗಳು ಉಡಾಯಿಸಿದರೆ ಅದನ್ನು ಹೊಡೆದು ಉರುಳಿಸುವುದು ಸುಲಭದ ಮಾತಲ್ಲ. ಆದರೆ ವೇಗವಾಗಿ ಬರುವ ಕ್ಷಿಪಣಿಯನ್ನು ಆಕಾಶದಲ್ಲಿ ಹೊಡೆದು ಉರುಳಿಸುವ ಸಾಮರ್ಥ್ಯ ಈ ಎಸ್-400 ಟ್ರಯಂಫ್ ಗೆ ಇದೆ. ರಷ್ಯಾ 2007ರಲ್ಲಿ ಮೊದಲ ಬಾರಿಗೆ ಈ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು.
Advertisement
ಹೇಗೆ ಕೆಲಸ ಮಾಡುತ್ತೆ?
ನೆಲದಲ್ಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಶತ್ರು ಪಡೆಗಳ ಯುದ್ಧ ವಿಮಾನ ಹಾಗೂ ಕ್ಷಿಪಣಿ ದಾಳಿಯನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ದೀರ್ಘ ದೂರ ಕ್ರಮಿಸಬಲ್ಲ ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದ್ದು, 2007 ರಲ್ಲಿ ನಿರ್ಮಾಣಗೊಂಡಿದ್ದ ಎಸ್-300 ಶ್ರೇಣಿಯ ಹೊಸ ಆವೃತ್ತಿ ಇದಾಗಿದೆ.
380 ಕಿ.ಮೀ ವ್ಯಾಪ್ತಿ ಒಳಗಡೆ ಬರುವ ಹಲವು ಕ್ಷಿಪಣಿ ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಗುರುತಿಸಿ ಹೊಡೆದುರುಳಿಸುವ ಸೆಲ್ಫ್ ಸಿಸ್ಟಂ ವ್ಯವಸ್ಥೆ, ಬಹುಬಳಕೆಯ ರೇಡಾರ್ ಮತ್ತು ಗುರಿ ನಿಗದಿ ಉಡಾವಣೆ ವ್ಯವಸ್ಥೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಇದು ಒಳಗೊಂಡಿದೆ. ಲಾರಿಯ ಹಿಂಭಾಗದಲ್ಲಿ ವಾಯು ರಕ್ಷಣಾ ವ್ಯವಸ್ಥೆ ಇರುವ ಕಾರಣ ಯಾವ ಪ್ರದೇಶಕ್ಕೂ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಅಷ್ಟೇ ಅಲ್ಲದೇ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ. ಶತ್ರುಗಳ ದಾಳಿಯ ದಿಕ್ಕು ತಪ್ಪಿಸಲು ಏಕಕಾಲದಲ್ಲಿ 4 ಭಾಗಗಳಲ್ಲಿ ಕ್ಷಿಪಣಿಗಳನ್ನು ಗಗನಕ್ಕೆ ಚಿಮ್ಮಿಸಿ ರಕ್ಷಣಾ ಕವಚ ನಿರ್ಮಿಸಬಹುದಾಗಿದೆ. ಅಲ್ಲದೇ ಶತ್ರುನೆಲೆಯಿಂದ ತೂರಿ ಬರುವ ಮಾನವ ರಹಿತ ವಿಮಾನ, ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತಕ್ಕೆ ಅಗತ್ಯ ಏಕೆ?
ಪಾಕ್ ಬಳಿ ಇರುವ 20 ಫೈಟರ್ ಸ್ಕ್ವಾಡ್ ಡ್ರೋನ್ಸ್ ಹಾಗೂ ಚೀನಾ ಬಳಿ ಇರುವ ಎಫ್-16, ಜೆ-17 ಆವೃತ್ತಿಯ ಫೈಟರ್ ಡ್ರೋನ್ ಹಾಗೂ 800 4-ಜೆನ್ ಫೈಟರ್ ವಿಮಾನಗಳಿಗೆ ಎಸ್-400 ವಾಯು ರಕ್ಷಣಾ ವ್ಯವಸ್ಥೆ ದಿಟ್ಟ ಉತ್ತರ ನೀಡಲಿದೆ. ಭಾರತ ಈ ವ್ಯವಸ್ಥೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಸಿದ್ಧತೆ ನಡೆಸಿದೆ. ಭಾರತಕ್ಕೆ ಈ ವ್ಯವಸ್ಥೆ ಬಂದರೆ ವಾಯು ಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ.
ಯಾವೆಲ್ಲ ದೇಶಗಳಲ್ಲಿ ಈ ವ್ಯವಸ್ಥೆ ಇದೆ?
ರಷ್ಯಾದಿಂದ ಈ ವ್ಯವಸ್ಥೆಯನ್ನು ಮೊದಲು ಚೀನಾ ಖರೀದಿ ಮಾಡಿದೆ. 2014ರಲ್ಲಿ ಚೀನಾ ಒಪ್ಪಂದ ಮಾಡಿಕೊಂಡಿದ್ದು ಈಗಾಗಲೇ ಎಸ್-400 ಕ್ಷಿಪಣಿ ವ್ಯವಸ್ಥೆ ಚೀನಾಗೆ ತಲುಪಿದೆ. ಎಷ್ಟು ಪ್ರಮಾಣದಲ್ಲಿ ರಷ್ಯಾ ವಿತರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ. ಕಳೆದ ವರ್ಷ ಟರ್ಕಿ ಜೊತೆ ಒಪ್ಪಂದ ನಡೆದಿದೆ. ಭಾರತ ಅಷ್ಟೇ ಅಲ್ಲದೇ ಕತಾರ್ ಎಸ್-400 ಖರೀದಿಸಲು ಆಸಕ್ತಿ ತೋರಿಸಿದೆ.
ಒಪ್ಪಂದದ ಉದ್ದೇಶ ಏನು?
ರಷ್ಯಾದೊಂದಿಗೆ ಚೀನಾ ಉತ್ತಮ ಬಾಂಧವ್ಯ ಹೊಂದಿದರೆ ಭವಿಷ್ಯದಲ್ಲಿ ಭಾರತಕ್ಕೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣ ಮೋದಿ ವ್ಲಾದಿಮಿರ್ ಪುಟಿನ್ ಜೊತೆ ಉತ್ತಮ ಸಂಪರ್ಕ ಬೆಳೆಸಿದ್ದರು. ಇದಕ್ಕಾಗಿ ಕಳೆದ ಮೇನಲ್ಲಿ ರಷ್ಯಾಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದರು. ಈ ವೇಳೆಯೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಖರೀದಿಸುವ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ವಿಶ್ವದ ಮಿಲಿಟರಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಭಾರತಕ್ಕೆ ಎಸ್-400 ಸಹಕಾರಿಯಾಗಲಿದೆ.
ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ರಷ್ಯಾದೊಂದಿಗಿನ ಭಾರತದ ಉತ್ತಮ ಸಂಬಂಧ ಹೊಂದಿರುವುದು ಅಮೆರಿಕ ಹಾಗೂ ಚೀನಾ, ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಅಮೆರಿಕವೂ ರಷ್ಯಾ ಯುದ್ಧ ಸಾಮಾಗ್ರಿ ಖರೀದಿ ಮೇಲೆ ನಿರ್ಬಂಧ ವಿಧಿಸಿದೆ. ಇದರ ನಡುವೆಯೂ ಭಾರತ ದಿಟ್ಟ ನಿರ್ಧಾರ ಮಾಡಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಭಾರತದ ನೆರೆ ದೇಶಗಳ ಪೈಕಿ ಚೀನಾ ಮತ್ತು ಪಾಕಿಸ್ತಾನದಿಂದಲೇ ಕಿರಿಕ್ ಜಾಸ್ತಿ. ಆಗಾಗ ಖಂಡಾಂತರ ಕ್ಷಿಪಣಿಗಳನ್ನು ಚೀನಾ, ಪಾಕಿಸ್ತಾನ ಪರೀಕ್ಷೆ ಮಾಡುತ್ತಲೇ ಇರುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಿ ಆಗಬಹುದಾದ ದಾಳಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಭಾರತಕ್ಕೆ ಸಿಗಲಿದೆ.
ಅಮೆರಿಕ ಎಚ್ಚರಿಕೆ:
ಅಮೆರಿಕ ಯಾವಾಗಲೂ ತನ್ನ ಆರ್ಥಿಕ ಪ್ರಭಾವ ಬಳಸಿ ಇತರ ರಾಷ್ಟ್ರಗಳ ಆಂತರಿಕ ವಿಚಾರಕ್ಕೆ ತಲೆ ಹಾಕುತ್ತಿರುತ್ತದೆ. ರಷ್ಯಾ, ಇರಾನ್, ದಕ್ಷಿಣ ಕೊರಿಯಾ ದೇಶಗಳಿಗೆ ಆರ್ಥಿಕ ವ್ಯವಹಾರ ನಡೆಸುವ ಕುರಿತು ದಿಗ್ಬಂಧನ ವಿಧಿಸಿರುವ ಅಮೆರಿಕ ವಿಶ್ವದ ಇತರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಇದನ್ನು ಮೀರಿ ಇತರ ದೇಶಗಳು ಈ ರಾಷ್ಟ್ರಗಳೊಂದಿಗೆ ಹೆಚ್ಚಿನ ಆರ್ಥಿಕ ಒಪ್ಪಂದ ಮಾಡಿಕೊಂಡರೆ ಆ ದೇಶಗಳ ಮೇಲೂ ದಿಗ್ಬಂಧನ ವಿಧಿಸುವ ಅವಕಾಶವನ್ನು `ಕಾಟ್ಸಾ’ ಒಪ್ಪಂದ ಮೂಲಕ ಅಮೆರಿಕ ಹೊಂದಿದೆ. ಭಾರತ ಅಮೆರಿಕದಿಂದ ಸಾಕಷ್ಟು ಪ್ರಮಣದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ನಿರ್ಬಂಧ ಹೇರಲಿಕ್ಕಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಏನಿದು ಕಾಟ್ಸಾ?
ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.
ವಿಶ್ವಸಂಸ್ಥೆಯ ಕಾಯ್ದೆಯಲ್ಲ:
ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.