ಪಾಕ್‌ ಸಹ ಅಣುಬಾಂಬ್‌ ಹೊಂದಿದೆ, ಕೆರಳಿಸಿದ್ರೆ ಭಾರತದ ಮೇಲೆ ಎಸೆಯುತ್ತಾರೆ: ಕಾಂಗ್ರೆಸ್‌ ಮಾಜಿ ಸಚಿವ ಪ್ರಚೋದನಕಾರಿ ಹೇಳಿಕೆ!

Public TV
2 Min Read
Mani Shankar Aiyar

– ಅಪ್ಪಿ-ತಪ್ಪಿ ಭಾರತದ ಮೇಲೆ ಬಾಂಬ್‌ ಉಡಾಯಿಸಿ ಅಂದ್ರೆ ಏನಾಗುತ್ತೆ ಯೋಚಿಸಿ?
– ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಕಾಂಗ್ರೆಸ್‌ ಹಿರಿಯ ನಾಯಕ

ನವದೆಹಲಿ: ಪಾಕಿಸ್ತಾನವು ಸಹ ಅಣುಬಾಂಬ್‌ಗಳನ್ನ (Nuclear Bombs) ಹೊಂದಿದೆ. ನಮ್ಮ ಸರ್ಕಾರ ಅವರನ್ನ ಕೆರಳಿಸಿದರೆ, ಭಾರತದ ಮೇಲೆ ಎಸೆಯಬಹುದು. ಆದ್ದರಿಂದ ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು, ಇಲ್ಲದಿದ್ದರೆ ದೇಶವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್‌ (Mani Shankar Aiyar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹಿಂದೆಯೂ ಪಾಕಿಸ್ತಾನವನ್ನು (Pakistan) ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಭಾರತವು ಪ್ರಮಾಣು ಬಾಂಬ್‌ಗಳನ್ನು ಹೊಂದಿರುವಂತೆ ಪಾಕಿಸ್ತಾನವೂ ಸಹ ಹೊಂದಿದೆ. ನಾವು ಅವರನ್ನು ಗೌರವಿಸಿದರೆ, ನಮ್ಮನ್ನೂ ಅವರು ಗೌರವಿಸಿದ್ದಾರೆ. ನಾವು ಅವರನ್ನು ಕೆರಳಿಸಿದರೆ, ಅವರೂ ನಮ್ಮ ಮೇಲೆ ಪರಮಾಣು ಬಾಂಬ್‌ ಬಳಸಬೇಕೆಂದೇ ಯೋಚಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರನ್ನು ಸಾಗಿಸುವ ಡ್ರೋನ್‌ – ಮಧ್ಯಪ್ರಾಚ್ಯದ ಅಬುಧಾಬಿಯಲ್ಲಿ ಪ್ರಯೋಗ ಯಶಸ್ವಿ

ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಮಿಲಿಟರಿ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರೆ ಅದು ಇನ್ನಷ್ಟು ಉದ್ವಿಗ್ನತೆಗೆ ಕಾರಣವಾಗುತ್ತದೆ. ಒಂದು ವೇಳೆ ಯಾರೋ ಹುಚ್ಚ ಭಾರತದ ಮೇಲೆ ಬಾಂಬ್‌ಗಳನ್ನು ಉಡಾಯಿಸಲು ನಿರ್ಧರಿಸಿದ್ರೆ ಏನಾಗುತ್ತದೆ ಯೋಚಿಸಿ? ಅವರು ಅಪ್ಪಿ-ತಪ್ಪಿ ಲಾಹೋರ್‌ನಲ್ಲೇ ಬಾಂಬ್‌ ಸಿಡಿಸಿದ್ರೂ, ಅದರ ವಿಕಿರಿಣ ಅಮೃತಸರ ತಲುಪೋದಕ್ಕೆ 8 ಸೆಕೆಂಡುಗಳು ಬೇಕಾಗೋದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು

ಕಾಂಗ್ರೆಸ್‌ ಮಾಜಿ ಸಚಿವರ ಈ ಹೇಳಿಕೆಯನ್ನು ಬಿಜೆಪಿ ನಾಯಕರು ವ್ಯಾಪಕವಾಗಿ ಟೀಕಿಸಿದ್ದಾರೆ. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್‌ ಭಾರತದ ಮೇಲೆ ಯಾವ ಸಿದ್ಧಾಂತವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.

ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಕಾಂಗ್ರೆಸ್‌ ಸಿದ್ಧಾಂತ ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸಿಯಾಚಿನ್‌ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟಿಕೊಡುವುದು, ಪಾಕಿಸ್ತಾನಕ್ಕೆ ಬೆಂಬಲ ನೀಡಿ ದೇಶ ವಿಭಜನೆ ಮಾಡುವುದು, ಸುಳ್ಳು, ನಿಂದನೆ, ಬಡವರನ್ನ ದಾರಿ ತಪ್ಪಿಸುವುದು ನಕಲಿ ಬರವಸೆಗಳನ್ನು ನೀಡುವುದು ಇವೇ ಕಾಂಗ್ರೆಸ್‌ನ ಸಿದ್ಧಾಂತ ಎಂದು ಕಿಡಿ ಕಾರಿದ್ದಾರೆ.

Share This Article