ಶಿವಮೊಗ್ಗ: ಚೆಸ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 9 ವರ್ಷದಿಂದ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ಅಂಧ ಚೆಸ್ ಆಟಗಾರನಿಗೆ ಸರಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಬೆಳಗಿಸಿದ ಈ ಆಟಗಾರನ ಗುರುತಿಸುವ ಪ್ರಯತ್ನ ಸಹ ನಡೆದಿಲ್ಲ.
ರಾಜ್ಯದ ಕ್ರೀಡಾ ಸಚಿವರ ತವರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ, ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ ಕಿಶನ್ ಗಂಗೊಳ್ಳಿ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಕೀಡಾಪಟು. ಶಿವಮೊಗ್ಗದ ವಿನೋಬ ನಗರ ನಿವಾಸಿಯಾಗಿರುವ ಕಿಶನ್, ಹುಟ್ಟಿನಿಂದಲೇ ಶೇ.75% ಭಾಗ ದೃಷ್ಟಿ ಸಮಸ್ಯೆ ಹೊಂದಿದ್ದಾರೆ. ಆದರೂ ಛಲ ಬಿಡದೆ ಜೀವನದಲ್ಲಿ ಏನಾದರೂ ಸಾಧಿಸಬೇಕು, ತಾಯ್ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂಬ ಕಾರಣದಿಂದ ಕಿಶನ್ ಚೆಸ್ ಕಲಿತಿದ್ದಾರೆ.
Advertisement
Advertisement
ಚೆಸ್ ಕಲಿತು ಕೇವಲ ಜಿಲ್ಲೆ ಹಾಗೂ ರಾಜ್ಯಕ್ಕಷ್ಟೇ ಸೀಮಿತವಾಗದೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಹತ್ತು ಹಲವು ಪ್ರಶಸ್ತಿ, ಚಿನ್ನದ ಪದಕ ಗಳಿಸಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಇದ್ದರೂ ರಾಜ್ಯ ಸರಕಾರದಿಂದ ಸಿಗಬೇಕಾದ ಮನ್ನಣೆ, ಅವಕಾಶ, ಸಹಾಯ ಮಾತ್ರ ಇದುವರೆಗೂ ಕಿಶನ್ ಅವರಿಗೆ ಲಭಿಸಿಲ್ಲ.
Advertisement
2018 ರಲ್ಲಿ ಜಕಾರ್ತಾದಲ್ಲಿ ನಡೆದ ಮೂರನೇ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿರುವ ಕಿಶನ್ ಅವರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಸನ್ಮಾನ ಮಾಡಿದ್ದರು. ಆದರೆ ರಾಜ್ಯ ಸರಕಾರ ಮಾತ್ರ ಈ ಪ್ರತಿಭೆಯನ್ನು ಗುರುತಿಸಿಲ್ಲ. ಭವಿಷ್ಯದಲ್ಲಿ ವಿಶ್ವ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಬೇಕು ಎಂಬ ಕನಸು ಹೊತ್ತಿರುವ ಕಿಶನ್ ಕುಟುಂಬ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
Advertisement
ಈ ಕುರಿತು ಮಾತನಾಡಿರುವ ಕಿಶನ್ ಅವರ ತಾಯಿ ತನ್ನ ಮಗನಿಗೆ ಚೆಸ್ ತರಬೇತಿ ಕೊಡಿಸಲು ಬಡ್ಡಿ ಸಾಲ ಮಾಡಿ, ಮನೆಯಲ್ಲಿದ್ದ ಅಲ್ಪ ಸ್ವಲ್ಪ ಚಿನ್ನವನ್ನು ಗಿರವಿಯಿಟ್ಟು ತರಬೇತಿ ಕೊಡಿಸುತ್ತಿದ್ದೇವೆ. ಮುಂದೆ ಉನ್ನತ ತರಬೇತಿ ಪಡೆಯಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಸಂಘ ಸಂಸ್ಥೆಗಳು, ಸರಕಾರ ಪ್ರತಿಭೆಯನ್ನು ಗುರುತಿಸಿ ಸಹಾಯ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಪತಾಕೆ ಹಾರಿಸಿಸಲು ಸಿದ್ಧವಾಗುತ್ತಿರುವ ಕಿಶನ್ ಅವರನ್ನು ಗುರುತಿಸಿ ಕ್ರೀಡಾ ಸಚಿವ ಈಶ್ವರಪ್ಪ ನೆರವಿಗೆ ಧವಿಸಬೇಕು ಎಂಬುವುದು ನಮ್ಮ ಆಶಯವಾಗಿದೆ.