ನವದೆಹಲಿ: ಟಿವಿಯಲ್ಲಿ ಕಾಂಡೋಮ್ ಜಾಹೀರಾತುಗಳ ಪ್ರಸಾರಕ್ಕೆ ಕೇಂದ್ರ ಸರ್ಕಾರ ಹೊಸ ನಿಯಮವನ್ನ ರೂಪಿಸಿದೆ.
ಅಸಭ್ಯ ಕಾಂಡೋಮ್ ಜಾಹೀರಾತುಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಅನಾರೋಗ್ಯಕರ ಅಭ್ಯಾಸಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ಜಾಹೀರಾತುಗಳನ್ನು ಕೇವಲ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮಾತ್ರವೇ ಪ್ರಸಾರ ಮಾಡಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ.
Advertisement
Advertisement
ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಇದು ನಿರ್ದಿಷ್ಟ ವಯೋಮಿತಿಯವರಿಗೆ ಸೀಮಿತವಾದ್ದರಿಂದ ಮಕ್ಕಳು ಇದನ್ನು ವೀಕ್ಷಿಸುವುದರಿಂದ ಅವರ ಮೇಲೆ ಪರಿಣಾಮ ಬೀರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. 1994ರ ಕೋಡ್ ಆಫ್ ದಿ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ರೂಲ್ಸ್ ಅನ್ವಯ ಮಕ್ಕಳ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡುವುದು ಅಥವಾ ಅನಾರೋಗ್ಯಕರವಾದ ಅಭ್ಯಾಸಗಳಲ್ಲಿ ಆಸಕ್ತಿಯನ್ನು ಸೃಷ್ಟಿಸುವಂತಹ ಯಾವುದೇ ಜಾಹೀರಾತಿಗೆ ಅವಕಾಶವಿಲ್ಲ ಎಂಬುದನ್ನ ಸರ್ಕಾರ ಉಲ್ಲೇಖಿಸಿದೆ.
Advertisement
Advertisement
ಕೆಲವು ವಾಹಿನಿಗಳು ಪದೇ ಪದೇ ಕಾಂಡೋಮ್ ಜಾಹೀರಾತುಗಳನ್ನ ಪ್ರಸಾರ ಮಾಡುತ್ತಿದ್ದು, ಇವು ಅಸಭ್ಯವಾಗಿವೆ. ಅದರಲ್ಲೂ ಮಕ್ಕಳ ದೃಷ್ಟಿಯಿಂದ ಇದು ಅಸಭ್ಯ ಎಂದು ಅನೇಕ ದೂರುಗಳು ಬಂದಿರುವುದಾಗಿ ಸಚಿವಾಲಯ ತಿಳಿಸಿದೆ. ದೂರುಗಳ ಆಧಾರದ ಮೇಲೆ ಇಂತಹ ಜಾಹೀರಾತುಗಳ ಸಮಯವನ್ನು ನಿಯಂತ್ರಿಸಲು ಆಗುವುದಿಲ್ಲ. ಸಚಿವಾಲಯವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ ಕೆಲವು ತಿಂಗಳ ಹಿಂದಷ್ಟೇ ಸಚಿವಾಲಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸಚಿವಾಲಯ ಈ ಹೊಸ ಆದೇಶವನ್ನ ನೀಡಿದೆ.
ಇಂದಿನಿಂದಲೇ ಹೊಸ ಆದೇಶ ಜಾರಿಯಾಗಲಿದ್ದು, ಕಾಂಡೋಮ್ ಜಾಹೀರಾತುಗಳು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ನಡುವೆ ಮಾತ್ರ ಪ್ರಸಾರಗೊಳ್ಳುವಂತೆ ಸೂಚನೆ ನೀಡಿದೆ. ಜೊತೆಗೆ ಪ್ರೈಮ್ ಟೈಮ್‍ನಲ್ಲಿ ಯಾವುದೇ ಕಾಂಡೋಮ್ ಜಾಹೀರಾತು ಪ್ರಸಾರ ಮಾಡದಂತೆ ಸೂಚನೆ ನೀಡಿದೆ.