ಕೈಗೆ ಸೀಲ್ ಹಾಕಿದ್ರಿಂದ ಸ್ಕಿನ್ ಕ್ಯಾನ್ಸರ್ ಬರುತ್ತೆ – ಯುವಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

Public TV
2 Min Read
fb post skin cancer

ಬೆಂಗಳೂರು: ಕೈಗೆ ಸೀಲ್ ಹಾಕಿದ್ದಕ್ಕೆ ಕ್ಯಾನ್ಸರ್ ಬರುತ್ತದೆ ಎಂದು ವಿದೇಶದಿಂದ ಬಂದ ಯುವಕನೊಬ್ಬ ಹೇಳಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರಿನ ಯುವಕನೊಬ್ಬ ವಿದೇಶದಿಂದ ಮರಳಿದ್ದ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸೀಲ್ ಹಾಕಿ ಮನೆಯಲ್ಲೇ ಗೃಹಬಂಧನದಲ್ಲಿ ಇರಬೇಕೆಂದು ಸೂಚಿಸಲಾಗಿತ್ತು.

ಎಡಗೈಗೆ ಹಾಕಿರುವ ಸೀಲ್ ನೋಡಿ ಸಿಟ್ಟಾದ ಯುವಕ ಭಾರತ ನನಗೆ ಚರ್ಮದ ಕ್ಯಾನ್ಸರ್ ಸಹ ನೀಡುತ್ತದೆ ಎಂದು ಫೇಸ್‍ಬುಕ್ ಸ್ಟೇಟಸ್ ಹಾಕಿಕೊಂಡಿದ್ದ.

ಈ ಸ್ಟೇಟಸ್ ನೋಡಿದವರ ಪೈಕಿ ಒಬ್ಬರು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಚಾರ ತಿಳಿದ ಜನ ಚೆನ್ನಾಗಿ ಕ್ಲಾಸ್ ಮಾಡುತ್ತಿದ್ದಾರೆ. ನಿಮ್ಮಂತವರು ಗೃಹ ಬಂಧನದಲ್ಲಿರಬೇಕು ಹೊರಗಡೆ ಬಂದರೆ ತಿಳಿಯಬೇಕು ಎನ್ನುವ ಕಾರಣಕ್ಕೆ ಈ ಸೀಲ್ ಹಾಕಲಾಗಿದೆ. ನಿಮ್ಮಂತವರಿಗೆ ಭಾರತಕ್ಕೆ ಇಳಿಯಲು ಅವಕಾಶ ನೀಡಿದ್ದೇ ದೊಡ್ಡ ತಪ್ಪು ಎಂದು ಹೇಳಿ ಆಕ್ರೋಶ ಹೊರಹಾಕುತ್ತಿದ್ದಾರೆ.

ವಿದೇಶದಿಂದ ಮರಳಿದ ವ್ಯಕ್ತಿಗಳಿಂದಾಗಿ ದೇಶದಲ್ಲಿ ಕೊರೊನಾ ಹರಡದೇ ಇರಲು ಅವರ ಕೈಗೆ ಸೀಲ್ ಹಾಕಲಾಗುತ್ತಿದೆ. ಭಾರತದ ಚುನಾವಣಾ ಆಯೋಗ ಬಳಕೆ ಮಾಡುವ ಶಾಯಿಯನ್ನು ಬಳಸಿ ಸೀಲ್ ಹಾಕಲಾಗುತ್ತಿದೆ. 21 ದಿನಗಳ ಕಾಲ ಈ ಶಾಯಿ ಕೈಯಲ್ಲಿ ಇರುತ್ತದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಂಬಂಧ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈಗಾಗಲೇ 5 ಸಾವಿರಕ್ಕೂ ಹೆಚ್ಚು ಮಂದಿ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ವಿದೇಶದಿಂದ ಆಗಮಿಸಿ ಗೃಹಬಂಧನದಲ್ಲಿ ಇರಬೇಕಾದ ವ್ಯಕ್ತಿಗಳು ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರು ಬಂದಿದೆ. ಈ ವ್ಯಕ್ತಿಗಳು ಕಂಡು ಬಂದರೆ ದಯವಿಟ್ಟು 100ಕ್ಕೆ ಕರೆ ಮಾಡಿ ತಿಳಿಸಿ. ಅವರನ್ನು ನಮ್ಮ ಸಿಬ್ಬಂದಿ ಹಿಡಿದು ಬಂಧಿಸಿ ಸರ್ಕಾರಿ ಕ್ವಾರಂಟೈನ್ ನಲ್ಲಿ ಇಡುತ್ತಾರೆ.

ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾದ ವ್ಯಕ್ತಿ ಸಾರ್ವಜನಿಕವಾಗಿ ಓಡಾಡಿದರೆ ಅವರ ವಿರುದ್ಧ ಐಪಿಸಿ ಸೆಕ್ಷನ್ 269(ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು) ಅಡಿ ಕೇಸ್ ದಾಖಲಾಗಲಿದೆ. ಸಾರ್ವಜನಿಕವಾಗಿ ಸಂಚರಿಸಬಾರದು ಎಂದು ತಿಳಿದಿದ್ದರೂ ಈ ಕೃತ್ಯ ಎಸಗಿದರೆ ಗರಿಷ್ಠ ಆರು ತಿಂಗಳ ಶಿಕ್ಷೆ ಅಥವಾ ದಂಡ ಅಥವಾ ದಂಡ ಹಾಗೂ ಶಿಕ್ಷೆ ಎರಡನ್ನು ವಿಧಿಸಲು ಅವಕಾಶವಿದೆ.

Share This Article
Leave a Comment

Leave a Reply

Your email address will not be published. Required fields are marked *