ನವದೆಹಲಿ: ಜಿ7(G7) ದೇಶಗಳು ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಭಾರತ(India) ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿದೆ ಎಂದು ವರದಿಯಾಗಿದೆ.
ಪ್ರತಿ ಬ್ಯಾರೆಲ್‌ಗೆ ರಷ್ಯಾದ ಯುರಲ್ಸ್ ಕಚ್ಚಾ ತೈಲಕ್ಕೆ (Russia Urals Crude) ಜಿ7 ದೇಶಗಳು 60 ಡಾಲರ್(4,900 ರೂ.) ನಿಗದಿ ಮಾಡಿವೆ. ಆದರೆ ಭಾರತ ಪ್ರತಿ ಬ್ಯಾರೆಲ್ ಕಚ್ಚಾ ತೈಲವನ್ನು 49 ಡಾಲರ್‌ಗೆ (4,000 ರೂ.) ಖರೀದಿಸುತ್ತಿದೆ.
ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 79 ಡಾಲರ್‌ನಲ್ಲಿ ಮಾರಾಟವಾಗುತ್ತಿದೆ. ಜಿ7 ದೇಶಗಳ ನಿರ್ಧಾರವನ್ನು ಯಾರು ಬೆಂಬಲಿಸುತ್ತಾರೋ ಅವರಿಗೆ ನಾವು ತೈಲವನ್ನು ರಫ್ತು ಮಾಡುವುದಿಲ್ಲ ಎಂದು ರಷ್ಯಾ ಈಗಾಗಲೇ ತನ್ನ ನಿರ್ಧಾರ ತಿಳಿಸಿದೆ.
ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್, ಅಮೆರಿಕ, ಯುರೋಪಿಯನ್ ಯೂನಿಯನ್ ಜೊತೆ ಆಸ್ಟ್ರೇಲಿಯಾ ಒಂದು ಬ್ಯಾರೆಲ್ ರಷ್ಯಾದ ಕಚ್ಚಾ ತೈಲಕ್ಕೆ 60 ಡಾಲರ್(49 ಸಾವಿರ ರೂ.) ದರವನ್ನು ನಿಗದಿ ಮಾಡಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ
ಕಳೆದ ವಾರ ಜಿ7 ದೇಶಗಳು ಮತ್ತು ಮಿತ್ರರಾಷ್ಟ್ರಗಳು ವಿಧಿಸಿದ ತೈಲದ ಮೇಲಿನ ಬೆಲೆ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ರಷ್ಯಾ ಸ್ವಾಗತಿಸಿತ್ತು.
ತೈಲ ಮಾರಾಟದಿಂದ ಸಂಗ್ರಹವಾದ ಆದಾಯವನ್ನು ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿದೆ ಎಂದು ಆರೋಪಿಸಿ ಜಿ7 ದೇಶಗಳು ಈ ನಿರ್ಧಾರವನ್ನು ಕೈಗೊಂಡಿದ್ದು ಡಿ.5ರಿಂದ ಜಾರಿಗೆ ಬಂದಿದೆ.