– ಸೌರಶಕ್ತಿ ವಿದ್ಯುತ್ ಉತ್ಪಾದನೆ ಜತೆಗೆ ಸಬಲೀಕರಣ-ಸಮಗ್ರ ಅಭಿವೃದ್ಧಿಗೆ ಪೂರಕ
– ಅಂತಾರಾಷ್ಟ್ರೀಯ ಸೌರ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘನೆ
ನವದೆಹಲಿ: ಹವಾಮಾನ ಬದಲಾವಣೆ ಪ್ರಪಂಚದಾದ್ಯಂತ ಪರಿಣಾಮ ಬೀರುತ್ತಿದ್ದು, ಇದನ್ನೆದುರಿಸಲು ಭಾರತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಗುರಿ ಸಾಧನೆ ಮೂಲಕ ದೃಢವಾದ ಹೆಜ್ಜೆಯಿರಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಶ್ಲಾಘಿಸಿದರು.
ನವದೆಹಲಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (International Solar Alliance Assembly) 8ನೇ ಅಧಿವೇಶನವನ್ನು ಉದ್ಘಾಟಿಸಿ, ಹವಾಮಾನ ಬದಲಾವಣೆ ಎದುರಿಸಲು ಇಂದು ತುರ್ತು ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಸೌರಶಕ್ತಿ ಅಳವಡಿಕೆ ಮತ್ತು ಬಳಕೆ ಮೂಲಕ ಈ ಜಾಗತಿಕ ಸವಾಲೆದುರಿಸುವಲ್ಲಿ ಐಎಸ್‌ಎ ಮಹತ್ವದ ಪಾತ್ರವಹಿಸಿದೆ ಎಂದು ಪ್ರತಿಪಾದಿಸಿದರು.
ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸಮಾಜ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಬಲೀಕರಣ, ಅಂತರ್ಗತ ಅಭಿವೃದ್ಧಿಗೂ ಪೂರಕವಾಗಿದೆ. ದೊಡ್ಡ ಪ್ರಮಾಣದ ಸೌರ ಸ್ಥಾಪನೆಗಳ ವಿಸ್ತರಣೆ ವೇಳೆ ಆಯಾ ಪ್ರದೇಶದ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.

ಸೌರಶಕ್ತಿಯನ್ನು ಘನತೆ ಮತ್ತು ಸಾಮೂಹಿಕ ಸಮೃದ್ಧಿಯ ಮೂಲವಾಗಿ ಬಳಸಿಕೊಳ್ಳುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವು ಜಗತ್ತಿಗೆ ಮತ್ತು ಭವಿಷ್ಯದ ಪೀಳಿಗೆಗೆ ಹೆಚ್ಚಿನ ಸಮರ್ಪಣಾಭಾವದಿಂದ ಕೆಲಸ ಮಾಡಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು.
ಭಾರತ ಮಹತ್ವದ ಮೈಲಿಗಲ್ಲು:
ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಒಂದು ಮಹತ್ವದ ಮೈಲಿಗಲ್ಲಾಗಿ ಕಾರ್ಯ ನಿರ್ವಹಿಸುತ್ತಿದೆ. ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡುತ್ತಿದೆ. ಕೈಗೆಟುಕುವ ಮತ್ತು ಶುದ್ಧ ಇಂಧನ ಸಮುದಾಯಗಳನ್ನು ಸಬಲಗೊಳಿಸುತ್ತದೆ ಹಾಗೂ ಸ್ಥಳೀಯ ಆರ್ಥಿಕತೆಯನ್ನು ಮುನ್ನಡೆಸುತ್ತದೆ. ಸೌರಶಕ್ತಿ ವಿದ್ಯುತ್ ಉತ್ಪಾದನೆ ಮಾತ್ರವಲ್ಲ, ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗೂ ಪೂರಕವಾಗಿದೆ ಎಂದು ದ್ರೌಪದಿ ಮುರ್ಮು ಪ್ರತಿಪಾದಿಸಿದರು.

ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷ ಮತ್ತು ಎಲ್ಲಾ ಸದಸ್ಯ ರಾಷ್ಟ್ರಗಳು ಮೂಲಸೌಕರ್ಯ ಮತ್ತು ಜನಜೀವನದ ಮೇಲೆ ಕೇಂದ್ರೀಕರಿಸಬೇಕು. ಉದ್ಯೋಗ ಸೃಷ್ಟಿ, ಮಹಿಳಾ ನಾಯಕತ್ವ, ಗ್ರಾಮೀಣ ಜೀವನೋಪಾಯ ಮತ್ತು ಡಿಜಿಟಲ್ ಸೇರ್ಪಡೆಗೆ ನೆರವಾಗುವಂತೆ ಸೌರಶಕ್ತಿ ಸಾಮೂಹಿಕ ಕ್ರಿಯಾ ಯೋಜನೆ ಅಭಿವೃದ್ಧಿಪಡಿಸಬೇಕೆಂದು ರಾಷ್ಟ್ರಪತಿ ಇದೇ ವೇಳೆ ಸಲಹೆ ನೀಡಿದರು.
ಸೌರ ಪ್ರಗತಿಯನ್ನು ಮೆಗಾವ್ಯಾಟ್ ಮೂಲಕ ಮಾತ್ರವಲ್ಲದೆ ಸುಧಾರಿತ ಕುಟುಂಬಗಳ ಸಂಖ್ಯೆ ಮತ್ತು ಸಮುದಾಯಗಳ ಸಂಖ್ಯೆ ಮೂಲಕ ಅಳೆಯಬೇಕು. ತಂತ್ರಜ್ಞಾನ ಅಭಿವೃದ್ಧಿಗೆ ಗಮನ ಹರಿಸಬೇಕು. ಸೌರ ಸ್ಥಾಪನೆಗಳ ವೇಳೆ ಪರಿಸರ ಸಂರಕ್ಷಣೆ, ಹಸಿರು ಶಕ್ತಿಯತ್ತ ಗಮನಹರಿಸಿ ಪ್ರದೇಶದ ಪರಿಸರ ಸಮತೋಲನಕ್ಕೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಿಸಿದರು.
125 ಸದಸ್ಯ ರಾಷ್ಟ್ರಗಳ ಸಹಿ: ಸೌರಶಕ್ತಿಯಲ್ಲಿ ಜಾಗತಿಕ ಸಹಕಾರ ಮತ್ತು ಹೂಡಿಕೆಯನ್ನು ತ್ವರಿತಗೊಳಿಸಲು 125 ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರು, ಸಹಿ ಹಾಕಿದರು. ವಿವಿಧ ದೇಶಗಳ 550ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು 30 ಸಚಿವರು, ಸಹಾಯಕ ಸಚಿವರು ಭಾಗವಹಿಸಿದ್ದರು.
 


 
		
 
		 
		 
		 
		