ನವದೆಹಲಿ: ತನ್ನ ಗಡಿಯನ್ನು ಹೊಂದಿದ ರಾಷ್ಟ್ರಗಳ ಜೊತೆ ಕಿರಿಕ್ ಮಾಡುತ್ತಿರುವ ಚೀನಾ ಮತ್ತೆ ಭಾರತದ ಜೊತೆ ಕಿತ್ತಾಟ ಆರಂಭಿಸಿದೆ. ಅರುಣಾಚಲ ಪ್ರದೇಶ(Arunachal Pradesh) ತವಾಂಗ್‍ನಲ್ಲಿ(Tawang) ಪ್ರಾಂತ್ಯವನ್ನು ಕಬಳಿಸಬೇಕೆಂಬ ದುರ್ಬುದ್ಧಿಯೇ ಈಗ ಘರ್ಷಣೆಗೆ ಕಾರಣವಾಗಿದೆ.
ಅರುಣಾಚಲದಲ್ಲಿ ಭಾರತದ(India) ಸಾರ್ವಭೌಮತ್ವವವನ್ನು ಇಡೀ ವಿಶ್ವವೇ ಗುರುತಿಸಿರುವುದನ್ನು ಡ್ರ್ಯಾಗನ್ ದೇಶಕ್ಕೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ಇಡೀ ಅರುಣಾಚಲ ನಮ್ಮದು ಎಂದು ಚೀನಾ(China) ಕ್ಯಾತೆ ತೆಗೆಯುತ್ತಲೇ ಇದೆ. ಪ್ರಮುಖವಾಗಿ ತವಾಂಗ್ ವಶಕ್ಕೆ ಪಡೆಯಲು ಪ್ರಯತ್ನಿಸ್ತಿದೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?
ಚೀನಾದ ಕಣ್ಣು ಏಕೆ?
ಈಶಾನ್ಯ ಭಾರತದ ಅತಿ ದೊಡ್ಡ ರಾಜ್ಯ ಅರುಣಾಚಲ ಪ್ರದೇಶವಾಗಿದ್ದು ಟಿಬೆಟ್, ಭೂತಾನ್, ಮಯನ್ಮಾರ್ ಜೊತೆ ಗಡಿ ಹಂಚಿಕೊಂಡಿದೆ. ಈಶಾನ್ಯ ಭಾರತದ ಪಾಲಿಗೆ ಅರುಣಾಚಲ ರಕ್ಷಣಾ ಕವಚವಾಗಿದ್ದು ಟಿಬೆಟ್, ಬ್ರಹ್ಮಪುತ್ರ ಕಣಿವೆಯಲ್ಲಿರುವುದರಿಂದ ತವಾಂಗ್‍ಗೆ ಭೌಗೋಳಿಕ ಪ್ರಮುಖ್ಯತೆಯಿದೆ.
ಚೀನಾದ ಕಡೆ ಕ್ಷಿಪಣಿಗಳನ್ನು ಗುರಿಯಾಗಿಸಲು ಅರುಣಾಚಲ ಸೂಕ್ತ ಪ್ರದೇಶವಾಗಿದೆ. ಅಷ್ಟೇ ಅಲ್ಲದೇ ಚೀನಾದ ವೈಮಾನಿಕ ದಾಳಿಗೆ ಇಲ್ಲಿಂದಲೇ ತಿರುಗೇಟು ನೀಡಬಹುದು.
ತವಾಂಗ್ ಮೇಲೆ ಹಿಡಿತ ಸಾಧಿಸಿ ಈಶಾನ್ಯ ಭಾರತಕ್ಕೆ ನುಗ್ಗಲು ಚೀನಾ ಷಡ್ಯಂತ್ರ್ಯ ಮಾಡಿದ್ದು ಅರುಣಾಚಲವನ್ನು ದಕ್ಕಿಸಿಕೊಂಡರೇ ಭೂತಾನ್‌ಗೆ ನುಗ್ಗುವುದು ಸುಲಭವಾಗಲಿದೆ. ಟಿಬೆಟಿಯನ್ನರ ಬೌದ್ಧ ಧರ್ಮದ ಜೊತೆಗೆ ಅರುಣಾಚಲಕ್ಕೆ ನಿಕಟ ಬಾಂಧವ್ಯ ಹೊಂದಿದ್ದು ತವಾಂಗ್‍ನಲ್ಲಿ ಗಾಂಡೆನ್ ನಂಗ್ಯಾಲ್ ಲಾಟ್ಸೆ ಬೌದ್ಧ ಮಂದಿರವಿದೆ.