ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ಗೆ ಪೂರ್ವಭಾವಿಯಾಗಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ಅವರನ್ನು ನಾಯಕಿಯನ್ನಾಗಿ ನೇಮಿಸಲಾಗಿದೆ.
ಇತ್ತೀಚೆಗಷ್ಟೇ 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟರ್ ಎನಿಸಿದ್ದ ಹರ್ಮನ್ ಪ್ರೀತ್, 20ನೇ ವಯಸ್ಸಿನಲ್ಲೇ ಪದಾರ್ಪಣೆ ಮಾಡಿದ ಬಳಿಕ ಕಳೆದೊಂದು ದಶಕದಿಂದ ಎಲ್ಲ ಕ್ರಿಕೆಟ್ ಪ್ರಕಾರದಲ್ಲೂ ಭಾರತ ತಂಡಕ್ಕೆ ಆಧಾರ ಸ್ತಂಭವೆನಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿರುವ ಅವರು, ಅರ್ಜುನ ಪ್ರಶಸ್ತಿ ಪುರಸ್ಕೃತೆಯೂ ಆಗಿದ್ದಾರೆ. ಮಹಿಳೆಯರ ವಿಶ್ವಕಪ್ನಲ್ಲಿ ನಾಕೌಟ್ ಹಂತದ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ರನ್ (171*) ಸಿಡಿಸಿದ ದಾಖಲೆ ಜತೆಗೆ ನಾಯಕಿಯಾಗಿ ಉತ್ತಮ ಗೆಲುವಿನ ದಾಖಲೆಯನ್ನೂ ಹೊಂದಿದ್ದಾರೆ.
ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮೊಟ್ಟಮೊದಲ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಅವರ ಹೆಸರನ್ನು ಘೋಷಿಸಲು ಅಪಾರ ಖುಷಿಯಾಗುತ್ತಿದೆ. ರಾಷ್ಟ್ರೀಯ ತಂಡದ ನಾಯಕಿಯಾಗಿ ಅವರು ಭಾರತೀಯ ಮಹಿಳಾ ತಂಡಕ್ಕೆ ಕೆಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ತರಬೇತುದಾರರಾದ ಚಾರ್ಲೋಟ್ ಮತ್ತು ಜೂಲನ್ಬೆಂಬಲದೊಂದಿಗೆ ಅವರು ಮಹಿಳಾ ತಂಡಕ್ಕೆ ಶ್ರೇಷ್ಠ ಕ್ರಿಕೆಟ್ ಆಡಲು ಸ್ಫೂರ್ತಿ ತುಂಬುವ ವಿಶ್ವಾಸವಿದೆ. ಎಂಐ ತಂಡದ ಹೊಸ ಅಧ್ಯಾಯದ ಆರಂಭವನ್ನು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಅಭಿಮಾನಿಗಳ ನೆಚ್ಚಿನ ಎಂಐ ಬ್ರ್ಯಾಂಡ್ನ ನಿರ್ಭೀತಿ ಮತ್ತು ಮನರಂಜನೆಯ ಆಟವನ್ನು ನಮ್ಮ ಹುಡುಗಿಯರೂ ಆಡುವುದನ್ನು ನೋಡಲು ನಾನು ಕಾತರಗೊಂಡಿದ್ದೇನೆ. ಮುಂಬರುವ ಉತ್ಸಾಹಿ ಪ್ರಯಣಕ್ಕೆ ಹರ್ಮನ್‌ಪ್ರೀತ್ ಕೌರ್ ಮತ್ತು ಎಂಐ ತಂಡಕ್ಕೆ ಹೆಚ್ಚಿನ ಶಕ್ತಿ ಸಿಗುವಂತಾಗಲಿ ಎಂದು ನೀತಾ ಎಂ. ಅಂಬಾನಿ ಹೇಳಿದ್ದಾರೆ.
ಮುಖ್ಯ ಕೋಚ್ ಚಾರ್ಲೋಟ್ ಎಡ್ವರ್ಡ್ಸ್ಎದುರಾಳಿಯಾಗಿ ಮತ್ತು ಮೆಂಟರ್ ಜೂಲನ್ ಗೋಸ್ವಾಮಿ ಸಹ-ಆಟಗಾರ್ತಿ ಹಾಗೂ ನಾಯಕಿಯಾಗಿ ಆಡಿದ ಅನುಭವವನ್ನು ಹರ್ಮನ್‌ಪ್ರೀತ್ ಕೌರ್ ಹೊಂದಿದ್ದಾರೆ. ವಿದೇಶಿ ಟಿ20 ಲೀಗ್ಗಳಲ್ಲಿ ಆಡಿದ ಭಾರತದ ಮೊದಲ ಕ್ರಿಕೆಟರ್ ಎನಿಸಿರುವ ಹರ್ಮನ್‌ಪ್ರೀತ್, ಭಾರತೀಯ ಕ್ರಿಕೆಟ್ನ ಶ್ರೇಷ್ಠತೆಯನ್ನು ವಿಶ್ವಕ್ಕೆ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಜಾಗತಿಕ ಮಹಿಳಾ ಕ್ರಿಕೆಟ್ನ ಕೆಲ ಅತ್ಯುತ್ತಮ ತಾರೆಯರು ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಈಗ ಹರ್ಮನ್‌ಪ್ರೀತ್ ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್ ಪತನ – ಪಿಚ್ ವಿರುದ್ಧ ಭಾರೀ ಟೀಕೆ
ಮುಂಬೈ ಇಂಡಿಯನ್ಸ್ ತರಬೇತಿ ಬಳಗದಲ್ಲಿ ಚಾರ್ಲೋಟ್ ಎಡ್ವರ್ಡ್ಸ್(ಮುಖ್ಯ ಕೋಚ್), ಜೂಲನ್ಗೋಸ್ವಾಮಿ (ಮೆಂಟರ್, ಬೌಲಿಂಗ್ಕೋಚ್), ದೇವಿಕಾ ಪಾಲ್ಶಿಕರ್ (ಬ್ಯಾಟಿಂಗ್ ಕೋಚ್), ಲೈಡಿಯಾ ಗ್ರೀನ್ವೇ (ಫೀಲ್ಡಿಂಗ್ಕೋಚ್) ಇದ್ದಾರೆ. ಕೌರ್ ಸಾರಥ್ಯದ ತಂಡದಲ್ಲಿ ನಾಟ್ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಸ್ತಿಕಾ ಭಾಟಿಯಾ, ಹೀದರ್ಗ್ರಹಾಂ, ಇಸಬೆಲ್ವೊಂಗ್, ಅಮನ್ಜೋತ್ಕೌರ್, ಧಾರಾ ಗುಜ್ಜರ್, ಶೇಕಾ ಇಶಾಕ್, ಹ್ಯಾಲಿ ಮ್ಯಾಥ್ಯೂಸ್, ಕ್ಲೋಯಿ ಟ್ರೈಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲ, ಸೋನಂ ಯಾದವ್, ನೀಲಮ್ಬಿಸ್ಟ್, ಜಿಂಟಿಮನಿ ಕಲಿಟಾ ಆಟಗಾರ್ತಿಯರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಮೊದಲ ಪಂದ್ಯದಲ್ಲಿ ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.