ಇಂದೋರ್: ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್‌ನ (Test Cricket) ಮೊದಲ ದಿನವೇ 14 ವಿಕೆಟ್ ಉರುಳಿದ್ದು ಪಿಚ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗಿದೆ. ನಂತರ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 54 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್‌ಗಳಿಸಿದ್ದು 47 ರನ್ ಮುನ್ನಡೆಯಲ್ಲಿದೆ.
ಭಾರತದ ಪರವಾಗಿ ವಿರಾಟ್ ಕೊಹ್ಲಿ 22 ರನ್, ಶುಭಮನ್ ಗಿಲ್ 21 ರನ್ ಶ್ರೀಕರ್ ಭರತ್ ಮತ್ತು ಉಮೇಶ್ ಯಾದವ್ ತಲಾ 17 ರನ್ ಹೊಡೆದು ಔಟಾದರು. ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ 5 ವಿಕಟ್ ಪಡೆದರೆ ನಥನ್ ಲಿಯಾನ್ 3 ವಿಕೆಟ್, ಟಾಡ್ ಮರ್ಫಿ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ
ಆಸ್ಟ್ರೇಲಿಯಾ ಪರವಾಗಿ ಉಸ್ಮಾನ್ ಖವಾಜಾ 60 ರನ್, ಮಾರ್ನಸ್ ಲಾಬುಶೆನ್ 31 ರನ್, ಸ್ವೀವ್ ಸ್ಮಿತ್ 26 ರನ್ ಗಳಿಸಿ ಔಟಾಗಿದ್ದಾರೆ. ಪೀಟರ್ ಹ್ಯಾಂಡ್ಸ್‌ಕಾಂಬ್ 7 ರನ್, ಕ್ಯಾಮರೂನ್ ಗ್ರೀನ್ 6 ರನ್ ಗಳಿಸಿದ್ದು ನಾಳೆ ಬ್ಯಾಟಿಂಗ್ ಮಾಡಲಿದ್ದಾರೆ. ಭಾರತದ ಪರವಾಗಿ ಎಲ್ಲಾ 4 ವಿಕೆಟ್‌ಗಳನ್ನು ರವೀದ್ರ ಜಡೇಜಾ (Ravindra Jadeja) ಪಡೆದಿರುವುದು ವಿಶೇಷ.
ದ್ರಾವಿಡ್ ಪರಿಶೀಲನೆ:
ಮಧ್ಯಾಹ್ನ ಭೋಜನ ವಿರಾಮದ ವೇಳೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕ್ಯುರೇಟರ್ ಜೊತೆ ಪಿಚ್ ಬಳಿ ಬಂದು ಪರಿಶೀಲಿಸಿದ್ದಾರೆ. ಪಿಚ್ ವೀಕ್ಷಣೆ ಮಾಡಿದ ಬಳಿಕ ದ್ರಾವಿಡ್ ಅಸಮಾಧಾನಗೊಂಡಂತೆ ಕಾಣುತ್ತಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಟೀಕೆ:
ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇಯ ದಿನ ಅಥವಾ ಐದನೇ ದಿನ ಪಿಚ್ ಸಾಮಾನ್ಯವಾಗಿ ಬೌಲಿಂಗ್, ಸ್ಪಿನ್ ಪಿಚ್ ಆಗಿ ಬದಲಾಗುತ್ತದೆ. ಆದರೆ ಇಲ್ಲಿ ಮೊದಲ ದಿನವೇ ಸ್ಪಿನ್ನರ್‌ಗಳಿಗೆ ನೆರವು ಸಿಕ್ಕಿದೆ. ಬಾಲ್ ವೇಗವಾಗಿ ಟರ್ನ್ ಆಗುವುದನ್ನು ನೋಡಿ ಅಭಿಮಾನಿಗಳು ಕ್ಯುರೇಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೊದಲ ಟೆಸ್ಟ್ ಮತ್ತು ಎರಡನೇ ಟೆಸ್ಟ್ ಕೇವಲ ಮೂರು ದಿನಕ್ಕೆ ಅಂತ್ಯ ಕಂಡಿತ್ತು. ಈಗ ಮೊದಲ ದಿನವೇ 14 ವಿಕೆಟ್ ಪತನಗೊಂಡಿರುವ ಪರಿಣಾಮ ಈ ಟೆಸ್ಟ್ ಪಂದ್ಯವೂ ಬಹಳ ಬೇಗ ಮುಗಿಯುವ ಸಾಧ್ಯತೆಯಿದೆ.