ಬೆಂಗಳೂರು: ಕಾಂಗ್ರೆಸ್ ನಾಯಕರ ಕೈಗೆ ಸಿಗದೆ ನಾಟ್ ರೀಚೆಬಲ್ ಆಗಿದ್ದ ಪೌರಾಡಳಿತ ಸಚಿವ, ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದೋಸ್ತಿಗೆ ಮತ್ತೊಂದು ಶಾಕ್ ನೀಡಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಅವರು ಫೋನ್ ಮಾಡಿದರೂ ಆರ್.ಶಂಕರ್ ಸಂಪರ್ಕಕ್ಕೆ ಸಿಗಲಿಲ್ಲ. ಆದರೆ ಸ್ವಲ್ಪ ಸಮಯ ಬಳಿಕ ಸಚಿವರು ರಾಜೀನಾಮೆ ಕೊಟ್ಟು, ದೋಸ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ.
ಡಿಸಿಎಂ ಜಿ.ಪರಮೇಶ್ವರ್ ಅವರ ಮನೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಆರ್.ಶಂಕರ್ ಅವರು ಕೂಡ ಇದ್ದರು. ಈ ವೇಳೆ ನಾನು ದೋಸ್ತಿ ಸರ್ಕಾರದ ಜೊತೆಗೆ ಇರುತ್ತೇನೆ ಎಂದು ಆರ್.ಶಂಕರ್ ಮಾತು ಕೊಟ್ಟಿದ್ದರು. ಆದರೆ ಸಭೆಯ ಬಳಿಕ ಹೊರ ಬಂದು ಶಾಸಕ ನಾಗೇಶ್ ಅವರಿಗೆ ಫೋನ್ ಮಾಡಿ, ನಿಮ್ಮನ್ನು ಕರೆತರಲು ಡಿಸಿಎಂ ಜಿ.ಪರಮೇಶ್ವರ್ ಹಾಗೂ ಸಚಿವ ಡಿಕೆ ಶಿವಕುಮಾರ್ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ನಾಗೇಶ್ ಅವರು ಮಧ್ಯಾಹ್ನ 12:40 ಕ್ಕೆ ನಿಗದಿಯಾಗಿದ್ದ ವಿಮಾನವನ್ನು ತಕ್ಷಣವೇ ರೀ ಶೆಡ್ಯೂಲ್ ಮಾಡಿಸಿ ಮುಂಬೈಗೆ ಪ್ರಯಾಣ ಬೆಳೆಸಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ತಮ್ಮ ಸಚಿವ ಸ್ಥಾನವನ್ನು ಹಿಂಪಡೆಯುತ್ತಾರೆ ಎಂದು ಅರಿತ ಆರ್.ಶಂಕರ್ ಅವರು ಬಿಜೆಪಿ ನಾಯಕರು ಕಳುಹಿಸಿದ್ದ ಕಾರಿನಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿ, ಅತೃಪ್ತ ಶಾಸಕರನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.