ಚಂಡೀಗಢ: ಮಂಗಳವಾರದಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರೋ ಆಘಾತಕಾರಿ ಘಟನೆಯೊಂದು ಚಂಡೀಗಢದಲ್ಲಿ ನಡೆದಿದೆ.
ಬಾಲಕಿಯ ಮನೆಯ ಹತ್ತಿರವೇ ಇರುವ ಚಿಲ್ಡ್ರೆನ್ಸ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಬಾಲಕಿ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಸರ್ಕಾರಿ ಮಾಡೆಲ್ ಸೀನಿಯರ್ ಸೆಕೆಂಡರಿ ಸ್ಕೂಲ್‍ನಿಲ್ಲಿ ಸ್ವಾಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹಿಂಸಿರುಗುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ.
ಬಾಲಕಿ ಮನೆಗೆ ಹಿಂದಿರುಗಿದ ತಕ್ಷಣ ಘಟನೆ ಬಗ್ಗೆ ಮನೆಯವರಿಗೆ ತಿಳಿಸಿದ್ದಾಳೆ. ನಂತರ ಕುಟುಂಬಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಬಾಲಕಿಯನ್ನ ಘಟನಾ ಸ್ಥಳಕ್ಕೆ ಹಾಗೂ ನಂತರ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿ ನೀಡಿದ ಹೇಳಿಕೆಯ ಅನ್ವಯ ಚಂಡೀಗಢ ಪೊಲೀಸರು ಪೊಕ್ಸೋ ಕಾಯ್ದೆ ಸೇರಿದಂತೆ ಸಂಬಂಧಿತ ಐಪಿಸಿ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಆರ್‍ಪಿಸಿ ಯ ಸೆಕ್ಷನ್ 164ರ ಅಡಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಬಾಲಕಿ ಮೇಲೆ ಅಪರಿಚಿತನೊಬ್ಬ ಅತ್ಯಾಚಾರವೆಸಗಿದ್ದಾನೆ. ಐಪಿಸಿ ಸೆಕ್ಷನ್ 376, 506, 341 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 4ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿ ಸರಿತಾ ರಾಯ್ ಹೇಳಿದ್ದಾರೆ.
ಇಲ್ಲಿನ ಸೆಕ್ಟರ್ 17ರ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೆರೇಡ್ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಕಾರ್ಯಕ್ರಮ ಮುಗಿದ ನಂತರ ಎಸ್‍ಎಸ್‍ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಿಂದ ಹೊರಟಿದ್ದರು. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸ್ಥಳದಿಂದ ಪರಾರಿಯಾದ ಆರೋಪಿ 40 ವರ್ಷ ವಯಸ್ಸಿನವನು ಎಂದು ಪೊಲೀಸ್ ಮೂಲಗಳು ಹೇಳಿವೆ.
ಬಾಲಕಿ ಬಡ ಕುಟುಂಬಕ್ಕೆ ಸೇರಿದವಳಾಗಿದ್ದು, ಆಕೆಯ ತಂದೆ ತೋಟದ ಮಾಲಿಯಾಗಿ ಕೆಲಸ ಮಾಡುತ್ತಾರೆಂದು ತಿಳಿದುಬಂದಿದೆ. ಪೊಲೀಸರು ಪಾರ್ಕ್ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲನೆ ಮಾಡ್ತಿದ್ದಾರೆ.