ಗುವಾಹಟಿ: ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್‌ನ ಎರಡನೇ ಪಂದ್ಯದ ಮೊದಲ ದಿನ ದ.ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತು. ದಿನದ ಅಂತ್ಯಕ್ಕೆ 81.5 ಓವರ್‌ನಲ್ಲಿ 6 ವಿಕೆಟ್‌ಗಳಿಗೆ 247 ರನ್ ಗಳಿಸಿದೆ. ಸೆನುರಾನ್ ಮುತ್ತುಸಾಮಿ (25 ರನ್), ಕೈಲ್ ವೆರ್ರೆನ್ನೆ (1 ರನ್) ಕ್ರೀಸ್‌ನಲ್ಲಿದ್ದು, ಭಾನುವಾರ 2ನೇ ದಿನದ ಆಟ ಆರಂಭಿಸಲಿದ್ದಾರೆ.
ಆರಂಭಿಕ ಆಟಗಾರರಾದ ಏಡನ್ ಮಾರ್ಕ್ರಂ ಹಾಗೂ ರಿಯಾನ್ ರಿಕೆಲ್ಟನ್ ಜೋಡಿ ಮೊದಲ ವಿಕೆಟ್‌ಗೆ 161 ಎಸೆತಗಳಲ್ಲಿ 82 ರನ್ ಕಲೆಹಾಕಿತು. ಏಡನ್ ಮರ್ಕರಂ 81 ಎಸೆತಗಳಿಗೆ 38 ರನ್ (5 ಫೋರ್) ಗಳಿಸಿ ಪೆವಿಲಿಯನ್‌ಗೆ ಮರಳಿದ್ರೆ, ರಿಕೆಲ್ಟನ್ 35 ರನ್ (82 ಎಸೆತ, 5 ಬೌಂಡರಿ) ಗಳಿಸಿ ಔಟಾದರು. ಬಳಿಕ ಕ್ರೀಸ್‌ಗಿಳಿದ ತಂಡದ ನಾಯಕ ಟೆಂಬಾ ಬವುಮಾ 92 ಎಸೆತಗಳಿಗೆ 41 ರನ್ ಗಳಿಸಿ ಔಟಾದರು.
ತೆಂಬಾ ಬವುಮಾ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೊತೆಯಾಟವಾಡಿ 182 ಎಸೆತಗಳಿಗೆ 84 ರನ್ ಗಳಿಸಿಕೊಟ್ಟರು. ಟ್ರಿಸ್ಟನ್ ಸ್ಟಬ್ಸ್ 112 ಎಸೆತಗಳಿಗೆ 49 ರನ್, ವಿಯಾನ್ ಮಲ್ದರ್ 18 ಎಸೆತಗಳಿಗೆ 13 ರನ್, ಟೋನಿ ಡಿ ಝಾರ್ಜಿ 59 ಎಸೆತಗಳಿಗೆ 28 ರನ್ ಗಳಿಸಿ ಔಟಾದರು. ಸೆನುರನ್ ಮುತ್ತುಸಾಮಿ 25 ರನ್ ಹಾಗೂ ಕೈಲ್ ವೆರೆಯನ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತದ ಪರ ಜಸ್‌ಪ್ರೀತ್ ಬೂಮ್ರಾ 1 ವಿಕೆಟ್, ಮೊಹಮ್ಮದ್ ಸಿರಾಜ್ 1 ವಿಕೆಟ್ ಕಿತ್ತರೆ ಕುಲದೀಪ್ ಯಾದವ್ 3 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಕಿತ್ತರು.
ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾಕ್ಕೆ ಮಂಡಿಯೂರಿದ್ದ ಭಾರತಕ್ಕೆ ಗುವಾಹಟಿಯಲ್ಲಿ ಗೆಲ್ಲಲೇಬೇಕಾದ ಒತ್ತಡವಿದೆ. ಟೀಂ ಇಂಡಿಯಾ ನಾಯಕ ಗಿಲ್ ಗೈರಲ್ಲಿ ಉಪನಾಯಕ ರಿಷಭ್ ಪಂತ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
