ಜೋಹಾನ್ಸ್‌ಬರ್ಗ್: ಬ್ಯಾಟಿಂಗ್, ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು (South Africa) ಚೆಂಡಾಡಿದ ಭಾರತ (Team India) ದಾಖಲೆಯ 135 ರನ್‌ಗಳ ಜಯದೊಂದಿಗೆ 4 ಪಂದ್ಯಗಳ ಟಿ 20 (T20) ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 284 ರನ್‌ಗಳ ಕಠಿಣ ಸವಾಲನ್ನು ಪಡೆದ ದಕ್ಷಿಣ ಆಫ್ರಿಕಾ 18.2 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು.
ಆಫ್ರಿಕಾ ಪರವಾಗಿ ಸ್ಟಬ್ಸ್ 43 ರನ್ (29 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದರೆ ಡೇವಿಡ್ ಮಿಲ್ಲರ್ 36 ರನ್(27 ಎಸೆತ, 2 ಬೌಂಡರಿ, 3 ಸಿಕ್ಸ್) , ಮಾರ್ಕೊ ಜಾನ್ಸೆನ್ ಔಟಾಗದೇ 29 ರನ್(12 ಎಸೆತ, 2 ಬೌಂಡರಿ, 3 ಸಿಕ್ಸ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
ಆರ್ಶ್‌ದೀಪ್ ಸಿಂಗ್ 3 ವಿಕೆಟ್ ಕಿತ್ತರೆ ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್, ಹಾರ್ದಿಕ್ ಪಾಂಡ್ಯ, ರಮನ್‌ದೀಪ್ ಸಿಂಗ್, ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದರು.
2023 ರಲ್ಲಿ ಆಫ್ರಿಕಾ ವಿರುದ್ಧ ಭಾರತ ಜೋಹಾನ್ಸ್‌ಬರ್ಗ್‌ನಲ್ಲಿ 106 ರನ್‌ಗಳ ಜಯವನ್ನು ಸಾಧಿಸಿತ್ತು. ಇಲ್ಲಿಯವರೆಗೆ ಇದು ಆಫ್ರಿಕಾ ವಿರುದ್ಧ ದೊಡ್ಡ ಅಂತರದ ಗೆಲುವು ಆಗಿತ್ತು. ಈಗ ಈ ದಾಖಲೆಯನ್ನು ಭಾರತ ಮುರಿದ್ದಿದ್ದು ಮೂರನೇ ದೊಡ್ಡ ಅಂತರದ ಗೆಲುವು ಇದಾಗಿದೆ. ಇದನ್ನೂ ಓದಿ: ರನ್ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ
2023ರಲ್ಲಿ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 168 ರನ್‌ಗಳ ಗೆಲುವು ಮೊದಲ ಸ್ಥಾನದಲ್ಲಿದ್ದರೆ 2018ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ 143 ರನ್‌ಗಳ ಗೆಲುವು ಎರಡನೇ ಸ್ಥಾನದಲ್ಲಿದೆ.