T20 World Cup: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ – 1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.!

Public TV
2 Min Read
Team India 3

– ಆರ್ಮಿಯಿಂದ ತರಬೇತಿ ಪಡೆದ ಪಾಕ್‌ಗೆ ಪುಟಿದೇಳುವ ತವಕ

ನ್ಯೂಯಾರ್ಕ್​: ಇಡೀ ಕ್ರಿಕೆಟ್‌ ಜಗತ್ತೇ ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಣ ರೋಚಕ ಟಿ20 ವಿಶ್ವಕಪ್ (T20 World Cup) ಪಂದ್ಯಕ್ಕೆ ಕ್ಷಣಗಣನೆ ಬಾಕಿಯಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು (ಭಾನುವಾರ) ರಾತ್ರಿ 8ಕ್ಕೆ ಉಭಯ ತಂಡಗಳ ಮಧ್ಯೆ ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ (New york Stadium) ಹಣಾಹಣಿ ನಡೆಯಲಿದ್ದು, ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್‌ ಸಮರದಲ್ಲಿ ಈ ತೀವ್ರತೆ ಕಾಣಲು ಸಾಧ್ಯವೇ ಇಲ್ಲ. ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ.

Team India 2 1

2024ರ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ತಂಡದ ವಿರುದ್ಧ ವಿರೋಚಿತ ಸೋಲಿಗೆ ತುತ್ತಾಗಿರುವ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧ ಪುಟಿದೇಳುವ ತವಕದಲ್ಲಿದೆ. ಇನ್ನೂ ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಪಾಕ್ ವಿರುದ್ಧ ಗೆದ್ದು ಸೂಪರ್-8 ಹಂತಕ್ಕೆ ಲಗ್ಗೆಯಿಡುವ ಉತ್ಸಾಹದಲ್ಲಿದೆ. ಆದ್ರೆ ಪಾಕ್‌ ಸೂಪರ್-8 ಪ್ರವೇಶಿಸಲು ಈ ಗೆಲುವು ನಿರ್ಣಾಯಕವೂ ಆಗಿದ್ದು, ಪಾಕ್ ತಂಡಕ್ಕೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

Team India 1

ಮಳೆ ಭೀತಿ:
ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ನ್ಯೂಯಾರ್ಕ್​ನಲ್ಲಿ (New york Rains) ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ.67 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. 6 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದ ಪಂದ್ಯ ರದ್ದಾರೆ ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ.

ಸೋಲಿನ ಮುಖವನ್ನೇ ನೋಡದ ಭಾರತ:
2007ರಿಂದ ಈವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕ್ ಎದುರು ಸೋಲನ್ನೇ ಕಂಡಿಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ಮಾತ್ರ ಸೋಲು ಕಂಡಿದೆ. 2007ರಿಂದ ಈವರೆಗೆ ನಡೆದ 12 ಟಿ20ಐ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಪಾಕಿಸ್ತಾನ ಗೆದ್ದಿದ್ದರೆ, ಟೀಂ ಇಂಡಿಯಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

Ind vs Pak

1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.:
ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಇಂಡೋ ಪಾಕ್‌ ಕದನದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಬೆಲೆಯೂ ಭರ್ಜರಿಯಾಗಿ ಏರಿಕೆಯಾಗಿದೆ. ಪ್ರತಿ ಸೆಕೆಂಡ್‌ಗೆ 4 ಲಕ್ಷ ರೂ. ನಿಗದಿಪಡಿಸಲಾಗಿದೆ. ವಿಶ್ವಕಪ್‌ನ ಇತರೇ ಪಂದ್ಯಗಳಲ್ಲಿ ಪ್ರತಿ 10 ಸೆಕೆಂಡಿನ ಜಾಹೀರಾತಿಗೆ 6 ಲಕ್ಷ ರೂ. ಇದ್ದರೆ, ಭಾರತ ಮತ್ತು ಪಾಕ್‌ ಪಂದ್ಯದ ವೇಳೆ 10 ಸೆಕೆಂಡ್‌ ಜಾಹೀರಾತಿನ ಮೌಲ್ಯ 40 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಗಿ ಭದ್ರತೆ:
ಐಸಿಸ್‌ ಉಗ್ರರಿಂದ ಪಂದ್ಯದ ಮೇಲೆ ದಾಳಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಹಾಗೂ ಉಭಯ ತಂಡಗಳ ಆಟಗಾರರಿಗೆ ನ್ಯೂಯಾರ್ಕ್‌ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಅಮೆರಿಕೆ ಅಧ್ಯಕ್ಷರ ಕಾರ್ಯಕ್ರಮಗಳಿಗೆ ನೀಡುವ ಮಾದರಿಯಲ್ಲೇ ಎಫ್‌ಬಿಐ ಸೇರಿ ವಿವಿಧ ಭದ್ರತಾ ಏಜೆನ್ಸಿಗಳು ತಮ್ಮ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಿವೆ ಎಂದು ತಿಳಿದುಬಂದಿದೆ.

Share This Article