ಚಂಡೀಗಢ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ (Shubman Gill) ನಾಯಕತ್ವದ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಅಫ್ಘಾನ್ ವಿರುದ್ಧ ಭಾರತೀಯ ಆಟಗಾರರು ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಪಾರಮ್ಯ ಮೆರೆದ್ದಾರೆ. ಹೀಗಾಗಿ ಪ್ರವಾಸಿ ಅಫ್ಘಾನಿಸ್ತಾನ (Afghanistan) ತಂಡ ಫಾಲೋ ಆನ್ ಭೀತಿ ಎದುರಿಸುತ್ತಿದೆ.
ನ್ಯೂ ಚಂಡೀಗಢ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಮೊದಲ ದಿನದ ಅಂತ್ಯಕ್ಕೆ 368 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ, 2ನೇ ದಿನ 8 ವಿಕೆಟ್ ನಷ್ಟಕ್ಕೆ 568 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

ಶುಭಮನ್ ಗಿಲ್ 126 ರನ್, ರಿಷಭ್ ಪಂತ್ 81 ರನ್, ವಾಷಿಂಗ್ಟನ್ ಸುಂದರ್ ಅಜೇಯ 52 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 564 ರನ್ ಕಲೆ ಹಾಕಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಅಫ್ಘಾನ್ ತಂಡ 2ನೇ ದಿನದ ಅಂತ್ಯಕ್ಕೆ 39.5 ಓವರ್‌ಗಳಲ್ಲಿ 113 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಈ ಮೂಲಕ ಅಫ್ಘಾನಿಸ್ತಾನ 451 ರನ್‌ಗಳ ಭಾರೀ ಹಿನ್ನಡೆ ಅನುಭವಿಸಿದೆ. ಸದ್ಯ 43 ರನ್ ಗಳಿಸಿರುವ ರಹಮತ್ ಶಾ ಕ್ರೀಸ್‌ನಲ್ಲಿದ್ದು, ಸೋಮವಾರ 7ನೇ ಕ್ರಮಾಂಕದ ಬ್ಯಾಟರ್ ಜೊತೆಗೆ 3ನೇ ದಿನದಾಟ ಆರಂಭಿಸಲಿದ್ದಾರೆ.

ಪದಾರ್ಪಣೆ ಪಂದ್ಯದಲ್ಲಿ 3 ವಿಕೆಟ್ ಕಿತ್ತ ಮಾನವ್ ಸುತಾರ್
ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್‌ಗೆ ಮಾನವ್ ಸುತಾರ್ (Manav Suthar) ಪದಾರ್ಪಣೆ ಪಂದ್ಯದಲ್ಲೇ ಶಾಕ್ ಕೊಟ್ಟಿದ್ದಾರೆ. 15.5 ಓವರ್‌ಗಳಲ್ಲಿ ಕೇವಲ 21 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತ ಸುತಾರ್, ಬ್ಯಾಟಿಂಗ್‌ನಲ್ಲೂ 28 ರನ್‌ಗಳ ಕೊಡುಗೆ ನೀಡಿದ್ರು. ಇದರೊಂದಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದು ಮಿಂಚಿದರು.
ಫಾಲೋ ಆನ್ ಭೀತಿಯಲ್ಲಿ
ಸದ್ಯ 113 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿರುವ ಅಫ್ಘಾನ್ ತಂಡ 200 ಕ್ಕಿಂತಲೂ ಹೆಚ್ಚು ರನ್‌ಗಳ ಅಂತರ ಅನುಭವಿಸಿ ಆಲೌಟ್ ಆದ್ರೆ, ಭಾರತ ಫಾಲೋ ಆನ್ ಹೇರಬಹುದಾಗಿದೆ.

ಫಾಲೋ ಆನ್ ಎಂದರೇನು?
ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ತಂಡ 200 ರನ್ ಹಿನ್ನಡೆಯೊಂದಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್ ಕೊನೆಗೊಂಡರೇ ಎದುರಾಳಿ ತಂಡಗಳು ಫಾಲೋ ಆನ್ ಹೇರಬಹುದು. ಆಗ ಫಾಲೋ ಆನ್ ಪಡೆದ ತಂಡ, ಮೊದಲ ಇನ್ನಿಂಗ್ಸ್ ಅಂತ್ಯಗೊಂಡ ಬೆನ್ನಲ್ಲೇ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಬೇಕು. 2ನೇ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ರನ್ಗಳನ್ನು ಪೂರ್ಣಗೊಳಿಸಿ ಅದರ ನಂತರ ಎಷ್ಟು ರನ್ ಕಲೆಹಾಕುತ್ತದೊ ಅದನ್ನು ಟಾರ್ಗೆಟ್ ಆಗಿ ಪರಿಗಣಿಸಲಾಗುತ್ತದೆ.
