ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ – ಇಡಿ ಬೆನ್ನಲ್ಲೇ ಡಿಕೆಶಿಗೆ ಐಟಿ ಶಾಕ್

Public TV
2 Min Read
DK SHIVAKUMAR 4

ನವದೆಹಲಿ: ಜಾರಿ ನಿರ್ದೇಶನಾಲಯ(Enforcement Directorate) ಸಮನ್ಸ್‌ ಜಾರಿ ಮಾಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ (DK Shivakumar) ಆದಾಯ ತೆರಿಗೆ ಇಲಾಖೆ(Income Tax) ಪ್ರಕರಣದಲ್ಲಿ ಶಾಕಿಂಗ್‌ ಸುದ್ದಿ ಪ್ರಕಟವಾಗಿದೆ. ಐಟಿ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

2018 ರಲ್ಲಿ ಬಿಡದಿಯ ಈಗಲ್ಟನ್‌ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ  ಐಟಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ಹೈಕೋರ್ಟ್‌(High Court) ರದ್ದು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಐಟಿ ಸುಪ್ರೀಂನಲ್ಲಿ(Supreme Court) ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಗಾಲ್ಫ್ ಆಡೋ ನೆಪದಲ್ಲಿ ಎಂಟ್ರಿಕೊಟ್ಟು ಡಿಕೆಶಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದು ಹೀಗೆ

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್‌ ಜಾರಿ ಮಾಡಿದೆ. ಅಷ್ಟೇ ಅಲ್ಲದೇ 4 ವಾರದ ಒಳಗಡೆ ಹೊಸ ಅರ್ಜಿ ಸಲ್ಲಿಕೆ ಮಾಡುವಂತೆ ಐಟಿಗೆ ಸೂಚಿಸಿದೆ.

ಏನಿದು ಪ್ರಕರಣ?
2017ರ ಆಗಸ್ಟ್ 2ರಂದು ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾಗಿತ್ತು. ಈ ಸಂದರ್ಭದಲ್ಲಿ ಈಗಲ್ಟನ್‌ ರೆಸಾರ್ಟ್‌ನಲ್ಲಿ(Eagleton Resort) ಗುಜರಾತಿನ 44 ಮಂದಿ ಕಾಂಗ್ರೆಸ್‌ ಶಾಸಕರ ಯೋಗಕ್ಷೇಮದ ಉಸ್ತುವಾರಿಯನ್ನು ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ನೋಡಿಕೊಳ್ಳುತ್ತಿದ್ದರು. ಈ ಮಾಹಿತಿ ತಿಳಿದ ಅಧಿಕಾರಿಗಳು ಅಲ್ಲಿಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ವೇಳೆ ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದು ಎನ್ನಲಾದ ಚೀಟಿಯನ್ನು ಡಿ.ಕೆ. ಶಿವಕುಮಾರ್ ಹರಿದು ಹಾಕಿದ್ದರು. ಆ ಪೇಪರ್‌ನಲ್ಲಿ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ್ದ ದಾಖಲೆ ಇತ್ತು ಎಂದು ಐಟಿ ಹೇಳಿತ್ತು. ಅಕ್ರಮ ವ್ಯವಹಾರ, ಡಿಜಿಟಲ್ ಕೇಬಲ್ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಇದರಲ್ಲಿ ಇತ್ತು ಎನ್ನುವುದು ಐಟಿಯ ಆರೋಪವಾಗಿತ್ತು. ಈ ಸಂಬಂಧ ಸಾಕ್ಷ್ಯನಾಶ ಮಾಡಿದ ಆರೋಪ ಹೊರಿಸಿ ಐಟಿ ಅಧಿಕಾರಿಗಳು ಕೇಸು ದಾಖಲಿಸಿದ್ದರು.

ಈ ಪ್ರಕರಣವನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2019 ರಲ್ಲಿ ರದ್ದು ಮಾಡಿತ್ತು. ನ್ಯಾಯಾಲಯದ ಆದೇಶ ಪ್ರಶ್ನಿಸಿ ಐಟಿ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಇಲ್ಲೂ ಹೈಕೋರ್ಟ್‌ ಐಟಿ ಅರ್ಜಿಯನ್ನು ತಿರಸ್ಕರಿಸಿತ್ತು.

ಆರೋಪಿಯಿಂದ ಬರೀ ಹಣಕಾಸು ವ್ಯವಹಾರಗಳು ನಡೆದಿದ್ದರೆ ಕೇಸ್‌ ದಾಖಲಿಸಲು ಸಾಧ್ಯವಿಲ್ಲ. ಲೆಕ್ಕವಿಲ್ಲದ ವಹಿವಾಟುಗಳು ನಡೆದಿದ್ದರೂ ತೆರಿಗೆ ಅಥವಾ ದಂಡದ ಪಾವತಿಗೆ ಆರೋಪಿ ಹೊಣೆಗಾರರಾಗಿದ್ದಾರೆ ಎಂಬುದನ್ನು ನಿರ್ಧರಿಸುವವರೆಗೆ ಯಾವುದೇ ಕಾನೂನು ಕ್ರಮವನ್ನು ಆರಂಭಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್‌ ಐಟಿ ಅರ್ಜಿಯನ್ನು ವಜಾಗೊಳಿಸಿ ಡಿಕೆಶಿಗೆ ಬಿಗ್‌ ರಿಲೀಫ್‌ ನೀಡಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *