ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ಜನಪ್ರತಿನಿಧಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಅನೇಕ ಕಡೆಗಳಲ್ಲಿ ಜನರಿಗೆ ಕುಕ್ಕರ್, ಸೀರೆ ಹಂಚಲಾಗುತ್ತಿದೆ. ಜೊತೆಗೆ ಭರ್ಜರಿ ಬಾಡೂಟ ಏರ್ಪಡಿಸುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಬ್ರೇಕ್ ಹಾಕಲು ಆದಾಯ ತೆರಿಗೆ ಇಲಾಖೆ (Income Tax) ಮುಂದಾಗಿದೆ.
ಹಣ, ಉಡುಗೊರೆ, ಆಮಿಷವೊಡ್ಡುವವರ ಮೇಲೆ ಐಟಿ ಕಣ್ಣಿಟ್ಟಿದೆ. ಚುನಾವಣೆ ಸಂಬಂಧ ಕಂಟ್ರೋಲ್ ರೂಂ ತೆರೆದಿದೆ. ದಿನದ 24 ಗಂಟೆಯೂ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆ. ಇದನ್ನೂ ಓದಿ: ಬಿಎಸ್‌ವೈ ಮನೆಯಲ್ಲಿ ಅಮಿತ್ ಶಾ ನಡೆಗೆ ಅಚ್ಚರಿ – ಭಾರೀ ಚರ್ಚೆ
ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳು ನಗದು ಹಣ ವಿತರಣೆ, ಯಾವುದೇ ವಸ್ತುಗಳನ್ನ ಉಡುಗೊರೆ ರೂಪದಲ್ಲಿ ಹಂಚುವುದು ಹಾಗೂ ಇತರೆ ಆಮಿಷಗಳನ್ನು ಒಡ್ಡಿದ್ದಲ್ಲಿ ಮಾಹಿತಿ ನೀಡಬಹುದು. ಐಟಿ ಇಲಾಖೆ ತೆರೆದಿರುವ ಕಂಟ್ರೋಲ್ ರೂಂ ಅಥವಾ ಇಮೇಲ್ ಮೂಲಕ ದೂರು ನೀಡಲು ಮನವಿ ಮಾಡಲಾಗಿದೆ. ಅದಕ್ಕಾಗಿ ಟೋಲ್ ಫ್ರೀ ನಂಬರ್ ವ್ಯವಸ್ಥೆ ಮಾಡಿದೆ.
ಟೋಲ್ ಫ್ರೀ ಸಂಖ್ಯೆ – 1800 425 2115, ದೂರವಾಣಿ ಸಂಖ್ಯೆ – 080 22861126 ಹಾಗೂ ಮೊಬೈಲ್ – 8277422825, 8277413614 ಗೆ ಕರೆ ಮಾಡಬಹುದು. ಅಲ್ಲದೇ ಇಮೇಲ್- cleankarnatakaelection@incometax.gov.in ಗೆ ಮಾಹಿತಿ ನೀಡುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾರ್ಡ್- ಹೆಚ್‍ಡಿಕೆ
ಮಾಹಿತಿ ನೀಡಿದ ವ್ಯಕ್ತಿಗಳ ವಿವರವನ್ನ ಗೌಪ್ಯವಾಗಿ ಇಡಲಾಗುವುದು. ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.