ವಿಜಯಪುರ: ಸಾಮಾನ್ಯವಾಗಿ ದೇವರಿಗೆ ಹೋಳಿಗೆ, ಹಣ್ಣು-ಹಂಪಲನ್ನ ನೈವೇದ್ಯವಾಗಿ ನೀಡೋದನ್ನ ನೋಡಿದ್ದೀರ. ಆದರೆ ವಿಜಯಪುರದ ಬಬಲಾದಿ ಮಠದ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಮದ್ಯವನ್ನೇ ನೈವೇದ್ಯವಾಗಿ ಇಡುತ್ತಾರೆ.
ಜಿಲ್ಲೆಯ ಬಬಲಾದಿ ಗ್ರಾಮದ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಮದ್ಯವನ್ನೇ ನೈವೇದ್ಯವಾಗಿ ಅರ್ಪಿಸುವುದು ಇಲ್ಲಿನ ವಿಶೇಷವಾಗಿದೆ. ದೇವರ ಮೂರ್ತಿಗಳ ಎದುರು ಭಕ್ತರು ಕೈಯಲ್ಲಿ ಮದ್ಯದ ಬಾಟಲ್‍ಗಳನ್ನ ಹಿಡಿದು ಸಾಲಾಗಿ ನಿಂತು ದೇವರ ಗದ್ದುಗೆಗೆ ಮದ್ಯ ಅರ್ಪಣೆ ಮಾಡಿದ್ದಾರೆ. ಇನ್ನೊಂದೆಡೆ ದೇವಸ್ಥಾನದ ಸುತ್ತ ರಸ್ತೆಗಳಲ್ಲೇ ಎಗ್ಗಿಲ್ಲದೆ ಮದ್ಯದ ಬಾಟಲ್ ಮಾರಾಟವಾಗುತ್ತಿವೆ. ಅಷ್ಟೇ ಅಲ್ಲದೇ ಮದ್ಯವನ್ನೇ ಪ್ರಸಾದದ ರೂಪದಲ್ಲಿ ಕುಡಿಯುತ್ತಾರೆ.
Advertisement
Advertisement
ಕಾಲಜ್ಞಾನಿ ಸದಾಶಿವ ಮುತ್ಯಾನ ಬಬಲಾದಿ ಗ್ರಾಮಕ್ಕೆ ಕಾಲಿಟ್ಟಾಗ ಕೃಷ್ಣಾ ನದಿಯ ನೀರನ್ನೆಲ್ಲಾ ಮದ್ಯವನ್ನಾಗಿ ಪರಿವರ್ತಿಸಿ ಪವಾಡ ಸೃಷ್ಠಿಸಿದ್ದರಂತೆ. ಮುತ್ಯಾನ ಪವಾಡ ಕಂಡಿದ್ದ ಗ್ರಾಮಸ್ಥರು ಅಂದಿನಿಂದ ಅವರನ್ನ ಪೂಜಿಸಲು ಆರಂಭಿಸಿದ್ದಾರೆ. ಹೀಗಾಗಿ ಜಾತ್ರೆಯಲ್ಲಿ ಭಕ್ತರು ಮದ್ಯವನ್ನೇ ಮುತ್ಯಾನ ಗದ್ದುಗೆಗೆ ಅರ್ಪಿಸುತ್ತಾರೆ. ಅಕ್ರಮಕ್ಕೆ ಕಡಿವಾಣ ಹಾಕುವ ದೃಷ್ಠಿಯಿಂದ ಅಬಕಾರಿ ಇಲಾಖೆಯೇ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರತಿ ವರ್ಷ ಜಾತ್ರೆಯ ದಿನದಲ್ಲಿ 12 ರಿಂದ 15 ಲಕ್ಷ ರೂ. ವಹಿವಾಟ ನಡೆಯುತ್ತದೆ ಎಂದು ಅಬಕಾರಿ ಜಿಲ್ಲಾಧಿಕಾರಿ ವೆಂಕಟೇಶ್ ಪದಕಿ ಹೇಳಿದ್ದಾರೆ.
Advertisement
ಜಾತ್ರೆಗೆ ಬೆಳಗಾವಿ, ಕಲಬುರಗಿ, ಬೀದರ್ ಸೇರಿದಂತೆ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿ ಪುನೀತರಾಗುತ್ತಾರೆ. ಇದು ಸುಮಾರು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.