ಕೋಲಾರ: ಸಿಬಿಐ ಅಧಿಕಾರಿಗಳು ಎಂದು ಮನೆಯೊಳಗೆ ನುಗ್ಗಿದ ದರೋಡೆಕೋರರು ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ.
ನಗರದ ಸಿ.ಭೈರೇಗೌಡ ಬಡಾವಣೆಯ ನಿವಾಸಿ ರಮೇಶ್ ಮನೆಯಲ್ಲಿ ಈ ದರೋಡೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆ ಸಮಯಕ್ಕೆ ಐದರಿಂದ ಆರು ಮಂದಿ ದರೋಡೆಕೊರರ ತಂಡ ರಮೇಶ್ ಅವರ ಮನೆ ಬಳಿ ಬಂದಿದ್ದಾರೆ. ಗೇಟ್ ಬಳಿಯೇ ಇದ್ದ ಮನೆಯ ಮಾಲೀಕ ರಮೇಶ್‍ಗೆ ನಾವು ಸಿಬಿಐನಿಂದ ಬಂದಿದ್ದೇವೆ ಎಂದು ಐಡಿ ಕಾರ್ಡ್ ತೋರಿಸಿ ಮನೆಯೊಳಗೆ ನುಗ್ಗಿದ್ದಾರೆ. ಒಳಗೆ ಹೋಗುತ್ತಿದಂತೆ ಆರೋಪಿಗಳು ರಮೇಶ್ ಹಾಗೂ ಆತನ ಪತ್ನಿಯನ್ನು ಕೈಕಟ್ಟಿಹಾಕಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ
ದಂಪತಿಗೆ ಪಿಸ್ತೂಲ್‍ಗಳನ್ನು ತೋರಿಸಿ ಲಾಕರ್‍ಗಳ ಕೀಗಳನ್ನು ಒಡೆದು, ಲಕ್ಷಾಂತರ ರೂಪಾಯಿ ನಗದು ಹಾಗೂ ಒಂದು ಕೆಜಿಗೂ ಹೆಚ್ಚು ಚಿನ್ನವನ್ನು ದೋಚಿದ್ದಾರೆ. ದಂಪತಿ ಮತ್ತು ಪುತ್ರನನ್ನು ದೇವರ ಕೋಣೆಯೊಳಗೆ ಕೂಡಿಹಾಕಿರುವ ಢಕಾಯಿತರು ಅಲ್ಲಿಂದ ಪರಾರಿಯಾಗಿದ್ದಾರೆ. ಮನೆಯ ಸಿಸಿಟಿವಿಗೆ ಸಂಬಂಧಿಸಿದ ಹಾರ್ಡ್ ಡಿಸ್ಕ್ ನ್ನು ಸಹ ಹೊತ್ತೊಯ್ದಿದ್ದಾರೆ. ಸದ್ಯ ಮನೆ ಸದಸ್ಯರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಸ್ಥಳಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಘಟನೆ ನಡೆದ ಸ್ಥಳದಲ್ಲಿ ಆರು ಮಂದಿ ದರೋಡೆಕೋರರು ಬಡಾವಣೆಯಲ್ಲಿ ಓಡಾಟ, ಚಲನವಲನಗಳು ಮತ್ತು ಕಾರಿನ ಓಡಾಟ ಬಡಾವಣೆಯ ಇತರೆ ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪರಿಶೀಲನೆ ನಡೆಸಲಾಗಿದೆ. ಇದನ್ನೂ ಓದಿ: ಪುರುಷನ ವೇಷಧರಿಸಿ ಕಳ್ಳತನ ಮಾಡಲು ಬಂದ ಯುವತಿ ಅರೆಸ್ಟ್!