ಬಿಜೆಪಿ ಜೊತೆ ಮೈತ್ರಿ – ಜೆಜೆಪಿ ತೊರೆದ ಮಾಜಿ ಯೋಧ

Public TV
1 Min Read
Tej Bahadur quit jjp

ಚಂಡೀಗಢ: ಹರ್ಯಾಣ ವಿಧಾನ ಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದಕ್ಕೆ, ಬಿಜೆಪಿ ಜೊತೆ ಜನನಾಯಕ ಜನತಾ ಪಕ್ಷ (ಜೆಜೆಪಿ) ಮೈತ್ರಿ ಮಾಡಿಕೊಂಡಿದೆ. ಈ ಕಾರಣಕ್ಕೆ ಮಾಜಿ ಯೋಧ ತೇಜ್ ಬಹದ್ದೂರ್ ಇಂದು ಜೆಜೆಪಿ ಪಕ್ಷವನ್ನು ತೊರೆದಿದ್ದಾರೆ.

ಸೇನೆಯಿಂದ ವಜಾಗೊಂಡಿದ್ದ ತೇಜ್ ಬಹದ್ದೂರ್ ಅವರು, ನಂತರ ರಾಜಕೀಯಕ್ಕೆ ಬಂದಿದ್ದರು. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಜೆಜೆಪಿಯಿಂದ ಸ್ಪರ್ಧಿಸಿ ಭಾರಿ ಅಂತರದಲ್ಲಿ ಸೋಲು ಕಂಡಿದ್ದರು.

Amit Shah Dushyant Chautala Main

ಆದರೆ ಗುರುವಾರ ಬಂದ ಹರ್ಯಾಣ ಚುನಾವಣಾ ಫಲಿತಾಂಶದಲ್ಲಿ ಮತದಾರ ಪ್ರಭು ಯಾವ ಪಕ್ಷಕ್ಕೂ ಬಹುಮತ ನೀಡಿರಲಿಲ್ಲ. ಹರ್ಯಾಣದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ 40 ಸ್ಥಾನದಲ್ಲಿ ಗೆದ್ದು ಮುಂಚೂಣಿಯಲ್ಲಿತ್ತು. ಆದ್ದರಿಂದ ಬಹುಮತ ಸಾಧಿಸಲು ಬಿಜೆಪಿಗೆ 6 ಸ್ಥಾನಗಳ ಅವಶ್ಯಕತೆ ಇತ್ತು. ಇದರಿಂದ ಬಿಜೆಪಿಗೆ ಸಿಎಂ ಸ್ಥಾನ ಜೆಜೆಪಿ ಪಕ್ಷದ ನಾಯಕ ದುಷ್ಯಂತ್ ಚೌಟಾಲಗೆ ಡಿಸಿಎಂ ಸ್ಥಾನ ಎಂಬ ಒಪ್ಪಿಗೆ ಮೇರೆಗೆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.

ಸೇನೆಯಿಂದ ವಜಾಗೊಂಡು ರಾಜಕೀಯಕ್ಕೆ ಬಂದಿದ್ದ ತೇಜ್ ಬಹದ್ದೂರ್ ಆರಂಭದ ದಿನದಿಂದಲೂ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಿದ್ದರು. ಆದರೆ ಈಗ ತಮ್ಮ ಪಕ್ಷ ಅಧಿಕಾರದ ಆಸೆಗೆ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡು ಜನರಿಗೆ ಮೋಸ ಮಾಡಿದೆ ರಾಜ್ಯದ ಜನರು ಇವರನ್ನು ತಿರಸ್ಕಾರ ಮಾಡಬೇಕು ಎಂದು ಹೇಳಿ ಪಕ್ಷದಿಂದ ತೇಜ್ ಬಹದ್ದೂರ್ ಹೊರ ಬಂದಿದ್ದಾರೆ.

BSF jawan Tej Bahadur

ಸೇನೆಯಲ್ಲಿ ನೀಡುವ ಆಹಾರ ಸರಿಯಿಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ತೇಜ್ ಬಹದ್ದೂರ್ ಅವರನ್ನು ಸೇನೆ ಸೇವೆಯಿಂದ ವಜಾಮಾಡಿತ್ತು. ನಂತರ ಅವರು ರಾಜಕೀಯಕ್ಕೆ ಬಂದಿದ್ದರು. ವಿಧಾನಸಭೆಯ ಚುನಾವಣೆ ಹಿನ್ನೆಲೆ ಈ ಸೆಪ್ಟಂಬರ್ ನಲ್ಲಿ ದುಷ್ಯಂತ್ ಚೌಟಾಲ ಅವರ ಸಮ್ಮುಖದಲ್ಲಿ ಜೆಜೆಪಿ ಪಕ್ಷ ಸೇರಿದ್ದರು. ಆದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಜೆಜೆಪಿ ಪಕ್ಷವನ್ನು ತೊರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *