ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೊಸ ಚುನಾವಣೆಯನ್ನು ಘೋಷಿಸದೇ ಹೋದರೆ, ಇಡೀ ದೆಶವೇ ಅಂತರ್ಯುದ್ಧಕ್ಕೆ ಇಳಿಯಲಿದೆ ಎಂದು ಪಾಕ್ ಮಾಜಿ ಪ್ರಧಾನಿ, ತೆಹ್ರಿಕ್-ಎ-ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಕಾನೂನು ಹಾಗೂ ಸಾಂವಿಧಾನದ ವಿಧಾನಗಳ ಮೂಲಕ ಚುನಾವಣೆ ನಡೆಸಲು ನಮಗೆ ಅವಕಾಶ ನೀಡುತ್ತಾರೆಯೇ ಎಂಬುದನ್ನು ನಾವು ಕಾದು ನೋಡುತ್ತೇವೆ. ಇಲ್ಲದಿದ್ದರೆ ಈ ದೇಶ ಅಂತರ್ಯುದ್ಧದೆಡೆ ಹೋಗುತ್ತದೆ ಎಂದರು. ಇದನ್ನೂ ಓದಿ: ಯೋಧರು ಪ್ರಯಾಣಿಸುತ್ತಿದ್ದ ವಾಹನ ಸ್ಫೋಟ: 3 ಸೈನಿಕರ ಸ್ಥಿತಿ ಗಂಭೀರ
ರಾಷ್ಟ್ರೀಯ ಅಸ್ಸೆಂಬ್ಲಿಗೆ ನಾನು ಹಿಂದಿರುಗುವ ಮಾತೇ ಇಲ್ಲ. ಏಕೆಂದರೆ ಈ ಹಿಂದಿನ ಸರ್ಕಾರವನ್ನು ಅದೇ ರಾಷ್ಟ್ರೀಯ ಅಸೆಂಬ್ಲಿ ಪಿತೂರಿಯಿಂದ ತೆಗೆದುಹಾಕಿತ್ತು. ಮತ್ತೆ ರಾಷ್ಟ್ರೀಯ ಅಸೆಂಬ್ಲಿಯನ್ನು ಒಪ್ಪಿಕೊಂಡರೆ, ಪಿತೂರಿಯನ್ನೇ ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದರು.
ಇಮ್ರಾನ್ ಖಾನ್ ಅವಿಶ್ವಾಸ ಮತದಿಂದಾಗಿ ಏಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ಸ್ಥಾನದಿಂದ ವಜಾಗೊಂಡಿದ್ದರು. ಆದರೆ ಅವಿಶ್ವಾಸ ಮತದ ಫಲಿತಾಂಶವನ್ನು ಒಪ್ಪಿಕೊಳ್ಳದ ಖಾನ್, ಅಮೆರಿಕ ತನ್ನ ಕೈವಾಡದಿಂದ ಸರ್ಕಾರವನ್ನು ಉರುಳಿಸಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ
ಅಧಿಕಾರದಿಂದ ಇಳಿದಾಗಿನಿಂದಲೂ ಇಮ್ರಾನ್ ಖಾನ್ ಹೊಸ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಿನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸಮ್ಮಿಶ್ರ ಸರ್ಕಾರ ವಿದೇಶದ ಪ್ರಭಾವ ಹೊಂದಿದೆ. ಷರೀಫ್ ಪಾಕಿಸ್ತಾನದ ಜನರ ನಿಜವಾದ ಪ್ರತಿನಿಧಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.