ನವದೆಹಲಿ: ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೆ ಸಿದ್ಧವಾಗಿರುವ ಪಾಕಿಸ್ತಾನ್ ತೆಹ್ರೇಕ್ ಇ ಇಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ ಅವರು, ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡುವ ಸಾಧ್ಯತೆಯಿದೆ.
ಆಗಸ್ಟ್ 11 ರಂದು ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ಅವರು, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರಿ ಸಂಘದ (ಸಾರ್ಕ್) ಮುಖ್ಯಸ್ಥರನ್ನು ಆಹ್ವಾನಿಸಲಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡುವರು ಎಂದು ಪಿಟಿಐ ಪಕ್ಷದ ಮೂಲಗಳು ತಿಳಿಸಿವೆ.
ಜುಲೈ 25ರಂದು ನಡೆದ ಪಾಕಿಸ್ತಾನ ನಡೆದ ಸಂಸತ್ ಚುನಾವಣೆಯಲ್ಲಿ ಪಿಟಿಐ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ಸರ್ಕಾರ ರಚನೆಗೆ ತುದಿಗಾಲಿನಲ್ಲಿ ಇಮ್ರಾನ್ ಖಾನ್ ನಂತಿದ್ದು, ಪ್ರಮಾಣವಚನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
ನರೇಂದ್ರ ಮೋದಿ ಇಮ್ರಾನ್ ಖಾನ್‍ಗೆ ಫೋನ್ ಕರೆ ಮಾಡಿ ವಿಜಯೋತ್ಸವದ ಶುಭಾಶಯ ತಿಳಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ ಇಮ್ರಾನ್ ಖಾನ್ ಅವರು, ದ್ವಿಪಕ್ಷೀಯ ನಿಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿ, ಹೊಸ ಅಧ್ಯಾಯ ಬರೆಯಬೇಕು ಎಂದು ಹೇಳಿದ್ದರು.
ಪಿಟಿಐ ಪಕ್ಷದ ವಕ್ತಾರ ಪವಾದ್ ಚೌಧರಿ ಕೂಡಾ ನರೇಂದ್ರ ಮೋದಿ ಆಹ್ವಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸುವ ಕುರಿತು ವಿದೇಶಾಂಗ ಸಚಿವಾಯದ ಜೊತೆ ಚರ್ಚೆ ನಡೆಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಆಹ್ವಾನಿಸಿದ್ದರು.