ಬೆಂಗಳೂರು: ಕರ್ನಾಟಕದ ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಗೆ (Agriculture) ಮಳೆ ನೀರನ್ನು ಒದಗಿಸಿ ಕೃಷಿ ಉತ್ಪಾದನೆ ಹೆಚ್ಚಿಸಲು 2023-24ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ (2014ರ ಅವಿಭಜಿತ ತಾಲೂಕುಗಳು) ಕೃಷಿ ಭಾಗ್ಯ ಯೋಜನೆ (Krishi Bhagya Yojana) ಮರು ಜಾರಿಗೊಳಿಸಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ತಿಳಿಸಿದರು.
ಕರ್ನಾಟಕ ವಿಧಾನಸಭೆಯಲ್ಲಿ ಶಿರಹಟ್ಟಿ ಶಾಸಕರಾದ ಡಾ. ಚಂದ್ರು ಲಮಾಣಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಮಳೆಯಾಶ್ರಿತ ಕೃಷಿ ನೀತಿ, 2014ರ ಅನ್ವಯ 100 ಕೋಟಿ ರೂ.ಗಳ ಅನುದಾನದಲ್ಲಿ ಸದರಿ ಯೋಜನೆಯನ್ನು 2023-24ನೇ ಸಾಲಿನಲ್ಲಿ ಪ್ಯಾಕೇಜ್ ಮಾದರಿಯಲ್ಲಿ (ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ತಂತಿಬೇಲಿ, ಪಂಪ್ ಸೆಟ್, ಸೂಕ್ಷ್ಮ ನೀರಾವರಿ ಘಟಕಗಳು) ಮಾರ್ಗಸೂಚಿ ಹಾಗೂ ಕ್ರಿಯಾ ಯೋಜನೆಯನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಶಿರಸಿಯ ಗೌರಿ ನಾಯ್ಕ್‌ಗೆ ಬಾವಿ ತೋಡಲು ಅನುಮತಿ
ಮುಂಗಾರು 2023ನೇ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳು ಸೇರ್ಪಡೆಯಾಗಿದ್ದರೂ ಸಹ 2023-24ನೇ ಸಾಲಿನಲ್ಲಿ ರಾಜ್ಯ ಮಳೆಯಾಶ್ರಿತ ಕೃಷಿ ನೀತಿ, 2014ರ ಅನ್ವಯ ಕೃಷಿ ಭಾಗ್ಯ ಯೋಜನೆ ರಾಜ್ಯದ ಒಣ ಕೃಷಿ ಹವಾಮಾನ ವಲಯಗಳಲ್ಲಿ ಇರುವ ತಾಲೂಕುಗಳಲ್ಲಿ ಮಾತ್ರ ಅನುಷ್ಠಾನ ಮಾಡಲಾಗುತ್ತಿದೆ. ಹಾಗಾಗಿ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳು ಒಣ ಕೃಷಿ ಹವಾಮಾನ ವಲಯದಲ್ಲಿ ಇಲ್ಲದಿರುವ ಕಾರಣ ಸೇರ್ಪಡೆ ಮಾಡಲಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಖಾತೆಗಳಿಂದ 65 ಕೋಟಿ ರೂ. ಕಡಿತಗೊಳಿಸಿದೆ – IT ವಿರುದ್ಧ ಗಂಭೀರ ಆರೋಪ
2023-24ನೇ ಸಾಲಿನ ಆಯವ್ಯಯದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಲಾಗಿದ್ದು, ರಾಜ್ಯದ ಮಳೆಯಾಶ್ರಿತ ಕೃಷಿ ನೀತಿ, 2014ರ ಅನ್ವಯ ರಾಜ್ಯದ 24 ಜಿಲ್ಲೆ 106 ತಾಲೂಕುಗಳಲ್ಲಿ (2014ರ ಅವಿಭಜಿತ ತಾಲೂಕುಗಳು) ಅನುಷ್ಠಾನ ಮಾಡಲು ಮಾರ್ಗಸೂಚಿ ಹಾಗೂ ಕ್ರಿಯಾ ಯೋಜನೆಯನ್ನು ಈಗಾಗಲೇ ಜಿಲ್ಲೆಗಳಿಗೆ ನೀಡಲಾಗಿದೆ. ಅದರಂತೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ಧಾರ್ಮಿಕ ಸಂಸ್ಥೆಗಳು & ಧರ್ಮದಾಯ ದತ್ತಿಗಳ ವಿಧೇಯಕ ಅಂಗೀಕಾರ
ಪ್ರಸಕ್ತ ಸಾಲಿನ ಆರ್ಥಿಕ ವರ್ಷಾಂತ್ಯಕ್ಕೆ ಕೇವಲ ಒಂದು ತಿಂಗಳು ಬಾಕಿ ಇದ್ದು, ಈ ಹಂತದಲ್ಲಿ ಯಾವುದೇ ಸೇರ್ಪಡೆ/ಬದಲಾವಣೆ ಹಾಗೂ ಅದರಂತೆಯೇ ಅನುಷ್ಠಾನ ಕಷ್ಟಸಾಧ್ಯವಾಗಿರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮಕ್ಕಳ್ ನೀಧಿ ಮೈಯಂ INDIA ಒಕ್ಕೂಟಕ್ಕೆ ಸೇರಿಲ್ಲ – ಕಮಲ್ ಹಾಸನ್ ಸ್ಪಷ್ಟನೆ