Connect with us

Chamarajanagar

5 ಮಂದಿಯ ಕುತಂತ್ರಕ್ಕೆ 15 ಮಂದಿ ಬಲಿ – ವಿಷ ಪ್ರಸಾದ ಸ್ಫೋಟಕ ಸತ್ಯ ರಿವೀಲ್

Published

on

– ದೇವಾಲಯದ ಆದಾಯದ ಮೇಲೆ ಕಣ್ಣಿಟ್ಟಿದ್ದ ಸ್ವಾಮೀಜಿ
– ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಲು ಕುತಂತ್ರ
– ಸಮೀಪದ ನಾಗರಕೊಯೀಲು ದೇವಾಲಯದ ಅರ್ಚಕನಿಂದ ವಿಷ ಮಿಶ್ರಣ
– ವಿಷ ಉಣಿಸಿ ದೇವಾಲಯ ವಶಕ್ಕೆ ಮುಂದಾದ ಸ್ವಾಮೀಜಿ ಬಣ

ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಇಮ್ಮಡಿ ಮಹದೇವ ಸ್ವಾಮೀಜಿಯೇ ಸುಪಾರಿ ನೀಡಿದ ಶಾಕಿಂಗ್ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತನ್ನ ಸಂಚನ್ನು ಕಾರ್ಯಗತಗೊಳಿಸಲು ಮಾರಮ್ಮ ದೇವಾಲಯದ ಪಕ್ಕದ ಗ್ರಾಮದಲ್ಲಿದ್ದ ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಗೆ ಮಹದೇವ ಸ್ವಾಮೀಜಿ ಸುಪಾರಿ ನೀಡಿದ್ದು, ಆತ ಪ್ರಸಾದದಲ್ಲಿ ವಿಷ ಬೆರೆಸಿದ್ದಾನೆ. ಅಷ್ಟೇ ಅಲ್ಲದೇ ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ತಪ್ಪೊಪ್ಪಿಕೊಂಡಿದ್ದಾನೆ ಎನ್ನುವ ವಿಚಾರವನ್ನು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಸುಪಾರಿಗೆ ಕಾರಣ ಏನು?
ಸುಳ್ವಾಡಿ ದೇವಾಲಯದ ಟ್ರಸ್ಟ್ ನಲ್ಲಿ ಎರಡು ಬಣಗಳಿತ್ತು. ಟ್ರಸ್ಟ್ ಅಧ್ಯಕ್ಷರಾಗಿ ಇಮ್ಮಡಿ ಮಹದೇವಸ್ವಾಮೀಜಿ, ಸದಸ್ಯ ವಿ.ಮಾದಯ್ಯ, ವ್ಯವಸ್ಥಾಪಕ ಮಾದೇಶ್ ಒಂದು ಬಣವಾಗಿದ್ದರೆ, ಖಜಾಂಚಿ ನೀಲಕಂಠ ಶಿವಾಚಾರ್ಯ, ಉಪಾಧ್ಯಕ್ಷ ಪಿ.ಗುರುಮಲ್ಲಪ್ಪ, ಕಾರ್ಯದರ್ಶಿ ಶಶಿಬಿಂಬ, ಸದಸ್ಯರಾದ ಚಿನ್ನಪ್ಪಿ, ಪಿ.ಶಿವಣ್ಣ, ಎಚ್.ಲೋಕೇಶ್, ಎನ್.ಕೇಶವಮೂರ್ತಿ ಮತ್ತೊಂದು ಬಣವಾಗಿತ್ತು.

ಮಾರಮ್ಮ ದೇವಸ್ಥಾನಕ್ಕೆ ಇತ್ತೀಚೆಗೆ ಲಕ್ಷಾಂತರ ಆದಾಯ ಬರತೊಡಗಿತ್ತು. ಹರಕೆ ರೂಪದಲ್ಲಿ ಬಂದ ಚಿನ್ನಾಭರಣ ಹಾಗೂ ಹಣಕಾಸನ್ನು ಇಮ್ಮಡಿ ಮಹದೇವಸ್ವಾಮಿ ಕೊಂಡೊಯ್ಯುತ್ತಿದ್ದರು. ಇದು ಇನ್ನೊಂದು ಬಣಕ್ಕೆ ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಣದ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಈ ನಡುವೆ ದೇವಸ್ಥಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಮ್ಮಡಿ ಸ್ವಾಮೀಜಿ ಪ್ರಯತ್ನ ನಡೆಸುತ್ತಿದ್ದರು.

ಗೋಪುರ ನಿರ್ಮಾಣ:
ಇತ್ತೀಚೆಗೆ ಟ್ರಸ್ಟಿ ಚಿನ್ನಪ್ಪಿ ಮತ್ತಿತರರು ಸ್ವಾಮೀಜಿಯ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿದ್ದರು. ಎಲ್ಲಾ ವ್ಯವಹಾರಕ್ಕೂ ಲೆಕ್ಕಪತ್ರ ಇಡುವಂತೆ ನೋಡಿಕೊಂಡಿದ್ದರು. ಆಡಿಟ್ ಸಹ ಮಾಡಿಸುತ್ತಿದ್ದರು. ಇದು ಇಮ್ಮಡಿ ಸ್ವಾಮೀಜಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಈಗಾಗಲೇ ಟ್ರಸ್ಟ್ ನಲ್ಲಿ 34 ಲಕ್ಷ ರೂ. ಗೂ ಹೆಚ್ಚು ಹಣ ಇತ್ತು. ಈ ಹಣದ ಜೊತೆಗೆ ಮಾರಮ್ಮ ದೇವಸ್ಥಾನಕ್ಕೆ ಗೋಪುರ ನಿರ್ಮಾಣಕ್ಕೆ ಸ್ವಾಮೀಜಿ ಬಣ ಮುಂದಾಗಿತ್ತು. ಸುಮಾರು ಒಂದೂವರೆ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಗೋಪುರ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಭಕ್ತರಿಂದ ಧನವನ್ನು ಸಂಗ್ರಹಿಸಿ ಗೋಪುರ ಕಟ್ಟಲು ಸ್ವಾಮೀಜಿ ಬಣ ಮುಂದಾಗಿತ್ತು.

ಟ್ರಸ್ಟ್ ನಲ್ಲಿ ಒಂದೂವರೆ ಕೋಟಿ ರೂ. ಹಣವಿಲ್ಲ. ಹೀಗಾಗಿ ಗೋಪುರ ನಿರ್ಮಾಣ ಮುಂದೂಡುವಂತೆ ಇನ್ನೊಂದು ಬಣ ಹೇಳಿತ್ತು. ಆದರೆ ಇದಕ್ಕೆ ಸ್ವಾಮೀಜಿ ಒಪ್ಪದೇ ತಾವೇ ಗೋಪುರ ನಿರ್ಮಾಣಕ್ಕೆ ಪ್ಲಾನ್ ಹಾಕಿಸಿದ್ದರು. ತಮಗೆ ಬೇಕಾದ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಲು ಮುಂದಾಗಿದ್ದರು. ಆದರೆ ಇದಕ್ಕೆ ಒಪ್ಪದ ಟ್ರಸ್ಟಿ ಚಿನ್ನಪ್ಪಿ ಗೋಪುರ ನಿರ್ಮಾಣ ಕಾರ್ಯವನ್ನು ತಾವೇ ಕೈಗೆತ್ತಿಕೊಳ್ಳಲು ತೀರ್ಮಾನಿಸಿ ಡಿಸೆಂಬರ್ 14 ರಂದು ಶಂಕುಸ್ಥಾಪನೆ ನೆರವೇರಿಸಲು ಸಮಾರಂಭ ನಿಗದಿ ಮಾಡಿದ್ದರು.

ಈ ಶಂಕುಸ್ಥಾಪನೆ ಸಮಾರಂಭಕ್ಕೆ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ ಹಾಗೂ ಮಲೆಮಹದೇಶ್ವರ ಬೆಟ್ಟ ಸಾಲೂರು ಮಠದ ಹಿರಿಯ ಶ್ರೀ ಪಟ್ಟದಗುರುಸ್ವಾಮಿಯವರನ್ನು ಆಹ್ವಾನಿಸಲಾಗಿತ್ತು. ಆದರೆ ಅಂದು ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷರಾಗಿದ್ದರೂ ಇಮ್ಮಡಿ ಸ್ವಾಮೀಜಿ ಬರಲೇ ಇಲ್ಲ. ಆದರೆ ಹಿರಿಯ ಶ್ರೀಗಳು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಆಗಮಿಸಿ ಭಾಗವಹಿಸಿದ್ದರು. ತಮ್ಮ ಮಾತನ್ನು ಕೇಳದೆ ತಾವೇ ಗೋಪುರ ನಿರ್ಮಾಣ ಮಾಡಲು ಮುಂದಾದ ಚಿನ್ನಪ್ಪಿ ಮತ್ತಿತ್ತರ ಬಗ್ಗೆ ಇಮ್ಮಡಿ ಸ್ವಾಮೀಜಿ ಒಳಗೊಳಗೆ ಕುದಿಯತೊಡಗಿದ್ದರು.

ಸ್ವಾಮೀಜಿಯಿಂದ ಸುಪಾರಿ:
ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಸ್ವಾಮೀಜಿಯದ್ದಾಗಿತ್ತು. ಆಗ ಪ್ರಸಾದಕ್ಕೆ ವಿಷ ಬೆರೆಸುವ ಕುತಂತ್ರ ಹೊಳೆದಿದೆ. ವಿಷಮಿಶ್ರಿತ ಪ್ರಸಾದ ಸೇವಿಸಿದವರು ವಾಂತಿ ಮಾಡಿ ಅಸ್ವಸ್ಥಗೊಳ್ಳುತ್ತಾರೆ. ಆಗ ಟ್ರಸ್ಟಿ ಚಿನ್ನಪ್ಪಿ ಹಾಗೂ ಇತರರಿಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ತಮ್ಮ ಆಡಳಿತಕ್ಕೆ ಒಳಪಡುತ್ತೆ ಎಂಬುದು ಸ್ವಾಮೀಜಿ ಪ್ಲಾನ್ ಮಾಡಿಕೊಂಡಿದ್ದರು.

ಸ್ವಾಮೀಜಿ ಮತ್ತು ವ್ಯವಸ್ಥಾಪಕ ಮಾದೇಶ್, ಮಾದೇಶನ ಹೆಂಡತಿ ಅಂಬಿಕಾ (ಅಂಬಿಕಾ ಸ್ವಾಮೀಜಿಯ ಸಂಬಂಧಿಯೂ ಹೌದು). ಈ ಮೂವರು ಸೇರಿ ಪ್ರಸಾದಕ್ಕೆ ವಿಷ ಬೆರೆಸಲು ಸಂಚು ರೂಪಿಸಿದರು. ಕ್ರಿಮಿನಾಶಕ ತಂದು ನಾಗರಕೊಯೀಲು ದೇವಸ್ಥಾನದ ಅರ್ಚಕ ದೊಡ್ಡಯ್ಯನಿಗೆ ನೀಡಿ ಹೇಗಾದರೂ ಮಾಡಿ ಪ್ರಸಾದಕ್ಕೆ ಬೆರೆಸುವಂತೆ ಸುಪಾರಿ ನೀಡಿದರು.

ಈ ಮೂವರ ಅಣತಿಯಂತೆ ದೊಡ್ಡಯ್ಯ ಶಂಕುಸ್ಥಾಪನೆ ಸಮಾರಂಭದ ದಿನ ಎಲ್ಲರ ಕಣ್ತಪ್ಪಿಸಿ ರೈಸ್ ಪ್ರಸಾದಕ್ಕೆ ಕ್ರಿಮಿನಾಶಕ ಮಿಶ್ರಣ ಮಾಡಿದ್ದ. ಈ ವಿಷಯ ಅರಿಯದ ಚಿನ್ನಪ್ಪಿ ಹಾಗೂ ಇತರರು ಶಂಕುಸ್ಥಾಪನೆ ಸಮಾರಂಭಕ್ಕೆ ಬಂದಿದ್ದ ಭಕ್ತರಿಗೆ ವಿಷಮಿಶ್ರಿತ ಪ್ರಸಾದ ವಿತರಿಸಿದರು. ನೋಡುನೋಡುತ್ತಿದ್ದಂತೆ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತು. ಒಬ್ಬೊಬ್ಬರಾಗಿ ಸಾವನ್ನಪ್ಪತೊಡಗಿದರು. ಒಟ್ಟಿನಲ್ಲಿ 5 ಮಂದಿಯ ಕುತಂತ್ರಕ್ಕೆ 15 ಮಂದಿ ಅಮಾಯಕರು ಬಲಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *