– ಒಟ್ಟು 50 ಕಂಡೀಷನ್; ಪಾಲಿಸದಿದ್ರೆ ಹಣ ಸಿಗಲ್ಲ ಅಂತ ವಾರ್ನಿಂಗ್
ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ (Operation Sindoor) ಬಳಿಕ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಇದೀಗ ತನ್ನ ವರಸೆ ಬದಲಿಸಿದೆ. ಸಾಲದ ಹಣ ಬಿಡುಗಡೆ ಮಾಡುವುದಕ್ಕೆ ಮೊದಲೇ 11 ಹೊಸ ಷರತ್ತುಗಳನ್ನು ಪಾಕಿಸ್ತಾನಕ್ಕೆ ವಿಧಿಸಿದೆ. ಜೊತೆಗೆ ಷರತ್ತು ಪಾಲಿಸದಿದ್ದರೆ ಹಣ ಸಿಗುವುದಿಲ್ಲ ಅಂತ ಎಚ್ಚರಿಕೆಯನ್ನೂ ನೀಡಿದೆ.
ಹೌದು.. ಪಾಕಿಸ್ತಾನಕ್ಕೆ ಸಾಲ (Pakistan Loan) ಮಂಜೂರು ಮಾಡಿದ ಬಳಿಕ ಐಎಂಎಫ್‌ಗೆ ಸಾಲ ಮರುಪಾವತಿ ಆಗುತ್ತದೆಯೇ ಇಲ್ಲವೇ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಸಾಲ ಮಂಜೂರು ಮಾಡಿದ್ದ ಐಎಂಎಫ್ 11 ಹೊಸ ಷರತ್ತುಗಳನ್ನು ವಿಧಿಸಿದೆ. ಇದರಿಂದ ಪಾಕ್ ಮೇಲೆ ಈವರೆಗೆ ವಿಧಿಸಿರುವ ಒಟ್ಟು ಷರತ್ತುಗಳು 50ಕ್ಕೆ ಏರಿಕೆಯಾಗಿದೆ. ಈ ಷರತ್ತುಗಳನ್ನು ಪೂರೈಸದ್ದರೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಐಎಂಎಫ್ ಖಡಕ್ಕಾಗಿ ಹೇಳಿದೆ. ಇದನ್ನೂ ಓದಿ: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು – ಪಾಕ್‌ನಲ್ಲಿ ಹೆಚ್ಚಿದ ಹಸಿವು; 1.1 ಕೋಟಿ ಜನರಿಗೆ ಆಹಾರ ಅಭದ್ರತೆ
ಜೊತೆಗೆ ಭಾರತ-ಪಾಕಿಸ್ತಾನದ ಉದ್ವಿಗ್ನತೆ (India Pakistan Clash) ಮುಂದುವರಿದ್ರೆ ಅದರ ಪರಿಣಾಮವು ಹಣಕಾಸು ವ್ಯವಸ್ಥೆ, ದೇಶದ ಆಂತರಿಕ ಮತ್ತು ಬಾಹ್ಯ ಸುಧಾರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭಾರತ, ಚೀನಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಎತ್ತಿಕಟ್ಟುತ್ತಿವೆ: ರಷ್ಯಾ ವಿದೇಶಾಂಗ ಸಚಿವ
17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಅನುಮೋದನೆ ನೀಡುವುದು, ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ ತರುವುದು, ವಿದ್ಯುತ್ ಬಿಲ್‌ಗಳ ಮೇಲೆ ಹೆಚ್ಚಿನ ಸರ್‌ಚಾರ್ಜ್ ವಿಧಿಸುವುದು ಸೇರಿದಂತೆ 11 ಷರತ್ತುಗಳನ್ನು ವಿಧಿಸಿದೆ. ಇದು ದುಸ್ಥಿತಿಯಲ್ಲಿರುವ ಪಾಕಿಸ್ತಾನದ ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?
ಏನೇನು ಷರತ್ತುಗಳು?
* ಮುಂದಿನ ಜುಲೈ 1ರೊಳಗೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಯ ಅಧಿಸೂಚನೆ ಹೊರಡಿಸುವುದು.
* 2026ರ ಫೆಬ್ರವರಿ 15 ರೊಳಗೆ ಅರ್ಧ ವಾರ್ಷಿಕ ಅನಿಲ ದರ ಹೊಂದಾಣಿಕೆ.
* ವಿದ್ಯುತ್ ಸ್ಥಾವರಗಳ ಮೇಲೆ ವಿಧಿಸುವ ಶುಲ್ಕಕ್ಕೆ ಈ ವರ್ಷದ ಅಂತ್ಯದೊಳಗೆ ಸುಗ್ರೀವಾಜ್ಞೆ ಶಾಶ್ವತಗೊಳಿಸಬೇಕು (ಕೈಗಾರಿಕಾ ಇಂಧನ ಬಳಕೆಯನ್ನು ರಾಷ್ಟ್ರೀಯ ಗ್ರಿಡ್‌ಗೆ ಬದಲಾಯಿಸುವ ಗುರಿ)
* ಮುಂದಿನ ಜೂನ್ ಅಂತ್ಯದ ವೇಳೆಗೆ ಸಾಲ ಸೇವಾ ಸರ್‌ಚಾರ್ಜ್‌ನ ಪ್ರತಿ ಯೂನಿಟ್‌ಗೆ 3.21 ರೂ. ಮಿತಿ ತೆಗೆದುಹಾಕುವುದು.
* 17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಸಂಸತ್ತಿನ ಅನುಮೋದನೆ
* ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ
* ದೀರ್ಘ ಕಾಲಕ್ಕೆ ಹಣಕಾಸು ವಲಯಕ್ಕೆ ಕಾರ್ಯತಂತ್ರ
* ವಿಶೇಷ ತಂತ್ರಜ್ಞಾನ ವಲಯಗಳ ಪ್ರೋತ್ಸಾಹಕ್ಕಾಗಿ ಹಂತ-ಹಂತದ ಯೋಜನೆ
* 3 ವರ್ಷಗಳು ಮಾತ್ರ ಉಪಯೋಗಿಸಿದ ಕಾರು ಆಮದು ಉದಾರೀಕರಣ
* ಅಭಿವೃದ್ಧಿ ವೆಚ್ಚದ ಬದ್ಧತೆ
* 6 ಟ್ರಿಲಿಯನ್ ಬಜೆಟ್‌ನಲ್ಲಿ 1.07 ಟ್ರಿಲಿಯನ್ ಅಭಿವೃದ್ಧಿ ವೆಚ್ಚಕ್ಕೆ ಮೀಸಲಿಡಬೇಕು.
IMF ಗುರಿಗಳಿಗೆ ಅನುಗುಣವಾಗಿ ಷರತ್ತು
IMF ವರದಿಯ ಪ್ರಕಾರ, ಪಾಕಿಸ್ತಾನದ ಮುಂಬರುವ ರಕ್ಷಣಾ ಬಜೆಟ್ ವೆಚ್ಚ 2,414 ಶತಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ 12% ಹೆಚ್ಚಾಗಲಿದೆ. ಆದರೆ ಇತ್ತೀಚೆಗೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವು ಈ ತಿಂಗಳ ಆರಂಭದಲ್ಲಿ ಇದನ್ನು 2,500 ಶತಕೋಟಿ ರೂ. ಅಂದರೆ 18% ಹೆಚ್ಚಿಸಲು ನಿರ್ಧರಿಸಿದೆ, ಇದು IMF ಹಣಕಾಸಿನ ಸಮತೋಲನ ಗುರಿಗೆ ವಿರುದ್ಧವಾಗಿದೆ. IMF ಗುರಿಗಳಿಗೆ ಅನುಗುಣವಾಗಿ ಇದೇ ಜೂನ್ ತಿಂಗಳ ಒಳಗೆ 2026ರ ಬಜೆಟ್ ಅನ್ನು ಅಂಗೀಕರಿಸುವಂತೆ ಐಎಂಎಫ್ ಸಂಸತ್ತಿಗೆ ಹೇಳಿದೆ. ಇದನ್ನೂ ಓದಿ: Hyderabad Fire | ಕಾಪಾಡಲು ಹೋಗಿದ್ದ ತಾಯಿ ಮಕ್ಕಳನ್ನು ಅಪ್ಪಿಕೊಂಡೇ ಸುಟ್ಟು ಕರಕಲು!