ಬೆಂಗಳೂರು: ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಪರವಾಗಿ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಜು.7ರ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ಇಡಿ(ಜಾರಿ ನಿರ್ದೇಶನಾಲಯ) ಸಮನ್ಸ್ ಜಾರಿ ಮಾಡಿದೆ.
ಈ ಬಗ್ಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಜಾರಿ ನಿರ್ದೇಶನಾಲಯ ಜುಲೈ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದು ನಿಜ, ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಜು.7ರೊಳಗೆ ವಿವರ ನೀಡುವಂತೆ ಜಾರಿ ನಿರ್ದೇಶನಾಲಯದ ನೋಟಿಸಿನಲ್ಲಿ ತಿಳಿಸಲಾಗಿದೆ. ಈ ಕುರಿತು ಇಡಿಗೆ ಮಾಹಿತಿ ನೀಡುತ್ತೇನೆ. ಇದನ್ನೇ ಮಾಧ್ಯಮದವರು ದೊಡ್ಡದು ಮಾಡುತ್ತಿದ್ದಾರೆ. ರಿಚ್ಮಂಡ್ ಟೌನ್‍ನಲ್ಲಿ ಖರೀದಿಸಿದ ಎರಡು ಪ್ರಾಪರ್ಟಿ ಕುರಿತು ಮಾಹಿತಿ ಕೇಳಿದ್ದಾರೆ. ಈ ಪ್ರಾಪರ್ಟಿ ಖರೀದಿಸಲು 2 ಕೋಟಿ ರೂ. ಮುಂಗಡ ಹಣ ಪಾವತಿಸಿ ಜೂನ್‍ನಲ್ಲಿ ನೋಂದಾಯಿಸಿಕೊಂಡಿದ್ದೇನೆ. ಈ ಕುರಿತು ಮಾಧ್ಯಮಗಳಿಗೂ ವಿವರ ನೀಡಿದ್ದೇನೆ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಇಡಿ ಸಮನ್ಸ್ ನೀಡಿರುವುದೂ ಇದೇ ಕಾರಣಕ್ಕೆ. ಮುಂದಿನ ತಿಂಗಳು ವಿಚವಾರಣೆಗೆ ಹಾಜರಾಗಿ ಮಾಹಿತಿ ನೀಡುತ್ತೇನೆ. ಸಮನ್ಸ್ ಬರುವ ಕುರಿತು ನನಗೆ ನಿರೀಕ್ಷೆ ಇತ್ತು. ಅದರಂತೆ ಇಂದು ಬಂದಿದೆ. ಸೂಕ್ತ ದಾಖಲೆಗಳೊಂದಿಗೆ ಉತ್ತರಿಸುತ್ತೇನೆ. ಮನ್ಸೂರ್ ಖಾನ್ ಬರಬೇಕು. ರಾಜಕಾರಣಿಗಳಿಗೆ ದುಡ್ಡು ನೀಡಿದ್ದೇನೆ ಎನ್ನುತ್ತಾರೆ. ಈ ಕುರಿತು ಯಾರು ದುಡ್ಡು ಪಡೆದಿದ್ದಾರೆ. ಯಾರಿಗೆ ದುಡ್ಡು ನೀಡಬೇಕು ಎಂಬುದರ ಸಂಪೂರ್ಣ ಮಾಹಿತಿ ನೀಡಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಜಮೀರ್ ತಿಳಿಸಿದ್ದಾರೆ.
ಎಸ್‍ಐಟಿ ತನಿಖೆಯಿಂದ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಸಿಬಿಐಗೆ ವಹಿಸುವಂತೆ ನಾನೇ ಮನವಿ ಮಾಡುತ್ತೇನೆ. ಇಡಿ ಈಗಾಗಲೇ ತನಿಖೆ ನಡೆಸುತ್ತಿದೆ. ಈ ವರೆಗೆ ಎಸ್‍ಐಟಿಯಿಂದ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ನಾನು ಎಲ್ಲ ರೀತಿಯ ಐಟಿ ಫೈಲ್ ಮಾಡಿದ್ದೇನೆ. ಯಾವುದೇ ತೊಂದರೆ ಇಲ್ಲ. ಎಸ್‍ಐಟಿ, ಇಡಿ, ಸಿಬಿಐ ಯಾವ ತನಿಖೆಯನ್ನಾದರೂ ನಡೆಸಲಿ ಒಟ್ಟಿನಲ್ಲಿ ಬಡವರಿಗೆ ನ್ಯಾಯ ಸಿಗಬೇಕು ಎಂದು ಜಮೀರ್ ಹೇಳಿದರು.