– ಪಾಕಿಸ್ತಾನದ ಸುಳ್ಳುಗಳೇ ಕಾಂಗ್ರೆಸ್ ಅಜೆಂಡಾ, ಅವರ ಬಗ್ಗೆ ಹುಷಾರಾಗಿರಿ
– ಪಾಕ್ ಪೋಷಿಸಲ್ಪಟ್ಟ ಭಯೋತ್ಪಾದಕರನ್ನ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದ ಮೋದಿ
ದಿಸ್ಪುರ್: ನಾನು ಶಿವನ ಭಕ್ತ, ಎಲ್ಲಾ ವಿಷವನ್ನು ನಾನು ನುಂಗುತ್ತೇನೆ, ಆದ್ರೆ ಬೇರೆಯವರಿಗೆ ಅವಮಾನವಾದ್ರೆ ಸಹಿಸಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಅಸ್ಸಾಂನ ದರಂಗ್‌ನಲ್ಲಿ ಅಭಿವೃದ್ಧಿಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಶಿವನ ಭಕ್ತ, ಎಲ್ಲಾ ವಿಷವನ್ನು ನಾನು ನುಂಗುತ್ತೇನೆ. ನನಗೆ ಎಷ್ಟೇ ನಿಂದನೆ ಮಾಡಿದರೂ ತಡೆಯುತ್ತೇನೆ. ಆದ್ರೆ ಬೇರೆಯವರಿಗೆ ಅವಮಾನವಾದ್ರೆ, ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದು ವಿಪಕ್ಷಗಳ ವಿರುದ್ಧ ಅಬ್ಬರಿಸಿ ಬೊಬ್ಬರಿದರು. ಇದನ್ನೂ ಓದಿ: 140 ಕೋಟಿ ಭಾರತೀಯರು ನನ್ನ ಏಕೈಕ ರಿಮೋಟ್ ಕಂಟ್ರೋಲ್ – ನರೇಂದ್ರ ಮೋದಿ
Assam’s healthcare sector is poised for a major upgrade. Speaking at a programme in Darrang. https://t.co/rjfGluOS4s
— Narendra Modi (@narendramodi) September 14, 2025
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಗುಡುಗಿದ ಮೋದಿ, ಪಾಕಿಸ್ತಾನದಿಂದ ಪೋಷಿಸಲ್ಪಟ್ಟ ಭಯೋತ್ಪಾದಕರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ 1962ರ ಭಾರತ-ಚೀನಾ ಯುದ್ಧವನ್ನು ಉಲ್ಲೇಖಿಸಿ ನೆಹರೂ ವಿರುದ್ಧವೂ ಮಾತನಾಡಿದರು. ಚೀನಾ ಯುದ್ಧದ ಬಳಿಕ ದೇಶದ ಮೊದಲ ಪ್ರಧಾನಿ ಈಶಾನ್ಯ ಜನರಿಗೆ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ ಎಂದು ದೂರಿದರು. ಇದನ್ನೂ ಓದಿ: ಮಗನ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ತಾಯಿ – 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ
ಇನ್ನೂ ಆಪರೇಷನ್ ಸಿಂಧೂರ ಯಶಸ್ಸನ್ನು ಸ್ಮರಿಸಿದ ಮೋದಿ, ಅಮ್ಮ ಕಾಮಾಕ್ಯಳಿಂದ ಆಪರೇಷನ್ ಸಿಂಧೂರ ಅದ್ಭುತ ಯಶಸ್ಸು ಸಾಧಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು. ಈಗ ಕೆಣಕಿದ್ರೆ ನಮ್ಮ ಪಡೆಗಳು ಆಪರೇಷನ್ ಸಿಂಧೂರ್ ನಡೆಸುತ್ತವೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ. ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ ಪಾಕಿಸ್ತಾನದ ಸೇನೆಯ ಪರವಾಗಿ ನಿಲ್ಲುತ್ತಾರೆ, ಪಾಕಿಸ್ತಾನದ ಅಜೆಂಡಾಗಳನ್ನ ಮುಂದಿಡ್ತಾರೆ. ಪಾಕಿಸ್ತಾನದ ಸುಳ್ಳುಗಳೇ ಕಾಂಗ್ರೆಸ್ ಅಜೆಂಡಾಗಳಾಗುತ್ತವೆ. ಆದ್ದರಿಂದ ಕಾಂಗ್ರೆಸ್ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಭಾರತ-ಪಾಕ್ ಕದನ ಯಾವಾಗಲೂ ಏಕೆ ರಣಕಣ? – ಆಕ್ರಮಣಕಾರಿ ಆಟಕ್ಕೆ ಟೀಂ ಇಂಡಿಯಾ ರೆಡಿ!
ವೇಗವಾಗಿ ಬೆಳೆಯುತ್ತಿರುವ ರಾಜ್ಯ
ಪ್ರಸ್ತುತ ವಿಶ್ವದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ, ಅಸ್ಸಾಂ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಹೆಣಗಾಡುತ್ತಿದ್ದ ಅಸ್ಸಾಂ ಈಗ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ. 13% ಬೆಳವಣಿಗೆಯ ದರ ಹೊಂದಿದೆ. ಇದು ಅಸ್ಸಾಂ ಜನರ ಕಠಿಣ ಶ್ರಮ ಹಾಗೂ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಫಲಿತಾಂಶವೂ ಆಗಿದೆ. ದಶಕಗಳ ಕಾಲ ಅಸ್ಸಾಂ ಆಳಿದ ಕಾಂಗ್ರೆಸ್ ಪಕ್ಷವು ಬ್ರಹ್ಮಪುತ್ರ ನದಿಗೆ ಕೇವಲ 3 ಸೇತುವೆಗಳನ್ನು ನಿರ್ಮಿಸಿತು, ಆದ್ರೆ ನಾವು ಕಳೆದ 10 ವರ್ಷಗಳಲ್ಲಿ 6 ಸೇತುವೆಗಳನ್ನು ನಿರ್ಮಿಸಿದ್ದೇವೆ ಎಂದು ಹೇಳಿದರು. ಭಾಷಣದ ವೇಲೆ ಆಪರೇಷನ್ ಸಿಂಧೂರದ ಯಶಸ್ಸನ್ನು ಮೋದಿ ಸ್ಮರಿಸಿದರು.
18,000 ಕೋಟಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ
ಸೆ.15ರ ವರೆಗೆ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ 6,300 ಕೋಟಿ ಮೌಲ್ಯದ ಆರೋಗ್ಯ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ದರ್ರಾಂಗ್ ವೈದ್ಯಕೀಯ ಕಾಲೇಜು, ಜಿಎನ್‌ಎಂ ಶಾಲೆ, ಬಿಎಸ್‌ಸಿ ನರ್ಸಿಂಗ್ ಕಾಲೇಜು ಹಾಗೂ 1,200 ಕೋಟಿ ಅಂದಾಜು ವೆಚ್ಚದ 2.9 ಕಿಮೀ ಉದ್ದದ ನರೇಂಗಿ-ಕುರುವಾ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ರು. ಇದೇ ವೇಳೆ ಅಸ್ಸಾಂನ ಕಾಮರೂಪ ಮತ್ತು ದರ್ರಾಂಗ್ ಜಿಲ್ಲೆ ಹಾಗೂ ಮೇಘಾಲಯದ ರಿ ಭೋಯ್ ಸಂಪರ್ಕಿಸುವ 4,530 ಕೋಟಿ ರೂ. ವೆಚ್ಚದ 118.5 ಕಿಮೀ ಉದ್ದದ ಗುವಾಹಟಿ ರಿಂಗ್ ರಸ್ತೆ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಗೋಲಾಘಾಟ್ ಜಿಲ್ಲೆಯ ನುಮಾಲಿಗಢ ಸಂಸ್ಕರಣಾಗಾರದಲ್ಲಿ 5000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬಿದಿರು ಆಧಾರಿತ ಎಥೆನಾಲ್ ಸ್ಥಾವರ ಮತ್ತು 7,230 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪೆಟ್ರೋ ಫ್ಲೂಯಿಡೈಸ್ಡ್ ಕ್ಯಾಟಲಿಟಿಕ್ ಕ್ರ್ಯಾಕರ್ ಘಟಕವನ್ನು ಉದ್ಘಾಟಿಸಲಿದ್ದಾರೆ. ಒಟ್ಟು ಸುಮಾರು 18,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.