ಹಾಸನ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈಗಿನಿಂದಲೇ ಚುನಾವಣಾ ರಣತಂತ್ರ ರೂಪಿಸುತ್ತಿರುವುದರಿಂದ ನಾನು ಯುದ್ಧಕ್ಕೆ ಇಳಿಯುವ ಕಾಲ ಸನ್ನಿಹಿತವಾಗಿದೆ ಎಂದು ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ದೇವೇಗೌಡರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಬೂಕನಬೆಟ್ಟದಲ್ಲಿ ಮಾತನಾಡಿದ ಅವರು, ನಾನು ಮೊನ್ನೆ ಮಾವಿನಕೆರೆ ರಂಗನಾಥ ಸ್ವಾಮಿ, ಇಂದು ನನ್ನ ಕುಲದೇವರು ಈಶ್ವರನನ್ನು ಪೂಜೆ ಮಾಡಿದ್ದೇನೆ. ಅವರಿಬ್ಬರ ಆಶೀರ್ವಾದ ಇದ್ದರೆ ಸಾಕು. ಇಡೀ ನಾಡಿನ ಜನರು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಯಾರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದರೆ ನಾನು ಯುದ್ಧಕ್ಕೆ ನಿಲ್ಲೋ ಕಾಲ ಬಂದಿದೆ. ನಾನು ಯುದ್ಧಕ್ಕೆ ಇಳಿಯುವ ಕಾಲ ಸಮೀಪಿಸಿದೆ. ನನ್ನ ಪಾಲಿಗೆ ಜನರೇ ಜನಾರ್ದನರು. ಅವರ ಹೆಸರಿಲ್ಲಿ ಹೋರಾಟ ಮಾಡುತ್ತೇನೆ. ಆ ನಂತರ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಯುತ್ತೊ? ಅಳಿಯುತ್ತೊ ಕಾದು ನೋಡೋಣ ಎಂದರು.
Advertisement
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ಧರ್ಮಪೀಠಕ್ಕೆ ಎಲ್ಲರೂ ಹೋಗಬೇಕು ಹಾಗೆ ಅವರೂ ಹೋಗಿದ್ದಾರೆ. ಆದರೆ ಅದರಲ್ಲಿ ಯಾವುದೇ ತಪ್ಪು ಅನಿಸಬಾರದು ಎಂದರು.