ಬೆಂಗಳೂರು: ಇಂದು ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದೇನೆ. ಈ ಹಿಂದೆಯೂ ಆಕಸ್ಮಿಕವಾಗಿ ಸಿಎಂ ಆಗಿದ್ದೆ. ಮುಖ್ಯಮಂತ್ರಿಯಾಗಿ ಎಷ್ಟು ದಿನ ಇರುತ್ತೇನೆ ಎನ್ನುವುದು ಮುಖ್ಯವಲ್ಲ. ಸಿಎಂ ಕುರ್ಚಿಯಲ್ಲಿ ನಾನು ಎಷ್ಟು ದಿನ ಇರಬೇಕೆಂಬುದನ್ನು ಭಗವಂತ ನಿರ್ಧರಿಸುತ್ತಾನೆ. ಎಂದಿಗೂ ಸಹ ನಾನು ಕುಳಿತಿರುವ ಕುರ್ಚಿಯನ್ನು ಭದ್ರ ಮಾಡಿಕೊಳ್ಳೋಕೆ ಮುಂದಾಗುವುದಿಲ್ಲ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ನಗರದ ಉತ್ತರ ಹಳ್ಳಿಯಲ್ಲಿ ಸಮಾಜ ಸಂಪರ್ಕ ವೇದಿಕೆ ನಿರ್ಮಾಣ ಮಾಡಿರೋ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಸಿಎಂ, ಭಗವಂತ ಎಲ್ಲಿಯವರೆಗೂ ಮುಖ್ಯಮಂತ್ರಿ ಆಗಿ ಇರುವಂತೆ ಆಶೀರ್ವಾದ ಮಾಡುತ್ತಾನೋ ಅಲ್ಲಿಯವರೆಗೆ ಇರುತ್ತೇನೆ. ಕೆಲವರು ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನ ಮಾಡುತ್ತಿದ್ದು, ಇಂತಹ ರಾಜಕೀಯ ಬೆಳವಣಿಗೆಯ ಬಗ್ಗೆ ನಾನು ಎಂದಿಗೂ ತಲೆ ಕೆಡಿಸಿಕೊಳ್ಳಲ್ಲ. ಕಳೆದ 12 ವರ್ಷದಿಂದ ನಾನು ನೊಂದಿದ್ದೇನೆ. ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ರು.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ತುರಹಳ್ಳಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನಿರ್ಮಿಸಿರುವ ಮಹಿಳಾ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದರು. pic.twitter.com/nwhqONl6je
— CM of Karnataka (@CMofKarnataka) August 25, 2018
ಒಂದು ವರ್ಷ ಜೈಲು:
ರೈತರು ಲೇವಾದೇವಿದಾರರ ಹತ್ತಿರ ಸಾಲ ಪಡೆದುಕೊಂಡಿದ್ರೆ, ಅವರ ಜೀವನವೆಲ್ಲಾ ಬಡ್ಡಿ ಕಟ್ಟೋದರಲ್ಲಿ ಅಂತ್ಯವಾಗುತ್ತಿದೆ. ರಾಜ್ಯದಲ್ಲಿ ಬಡ್ಡಿ ಕಟ್ಟುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ. ವರ್ಷಕ್ಕೆ 1 ಲಕ್ಷ 20 ಸಾವಿರಕ್ಕಿಂತಲೂ ಕಡಿಮೆ ವರಮಾನ ಹೊಂದಿರುವ ರೈತರಿಗೆ ಲೇವಾದೇವಿವಾರರು ಸಾಲ ಹಿಂದಿರುಗಿ ಕೊಡುವಂತೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ರೈತರಿಗೆ ಒತ್ತಡ ಹಾಕಿದ್ರೆ, ಆತನನ್ನು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಈ ನಿರ್ಧಾರದಿಂದ ಸಾಲ ನೀಡಿದ ಕೆಲವರಿಗೆ ತೊಂದರೆ ಆಗಬಹುದು. ಆದ್ರೆ ರೈತರು ತಾವು ಪಡೆದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ಕಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದ್ರೂ ಶೇ. 80 ರಷ್ಟು ಅಸಲು ಹಣವನ್ನು ರೈತ ಬಾಂಧವರು ಪಾವತಿಸಿದ್ದಾರೆ. ಕುಮಾರಣ್ಣನ ಕೈಯಲ್ಲಿ ಏನೂ ಆಗಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ರು.
ಮಾಜಿ ಸಿಎಂ ಹೇಳಿದ್ದೇನು?:
ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಅಂತಾ ಎಲ್ಲರು ಒಂದಾಗಿದ್ದರು. ನನ್ನ ಆಡಳಿತದ ಅವಧಿಯಲ್ಲಿ ಎಲ್ಲ ಜಾತಿಯ ಬಡ ಜನರಿಗೆ ಸಹಾಯ ಮಾಡಿರುವೆ. ಹೀಗಾಗಿ ನನಗೆ ಜನರ ಆಶೀರ್ವಾದವಿದೆ, ಮತ್ತೆ ಮುಖ್ಯಮಂತ್ರಿ ಆಗುತ್ತೇನೆ. ಇಂದು ರಾಜಕೀಯ ಹಣ ಮತ್ತು ಜಾತಿಯ ಮೇಲೆ ನಡೆಯುತ್ತಿದ್ದು, ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಉತ್ತಮ ಕೆಲಸಗಳನ್ನು ಮಾಡುವವರನ್ನು ಜನರು ಗೆಲ್ಲಿಸಬೇಕಿದೆ. ನನ್ನ ಆಡಳಿತದ ಅವಧಿಯಲ್ಲಿ ಹಾಲು, ಅಕ್ಕಿ, ಪಶು ಭಾಗ್ಯ, ಶೂ ಭಾಗ್ಯ ನೀಡಿರುವೆ. ಇವು ಕೇವಲ ಒಂದು ಜಾತಿಗೆ ಸಿಮೀತವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv