ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶ ನನಗೆ ಸಮಾಧಾನ ತಂದಿದೆ ಎಂದು ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವನಾಥ್ ಅವರು, ಸುಪ್ರೀಂ ಆದೇಶವನ್ನು ಈಗ ತಾನೇ ನಾನು ಮಾಧ್ಯಮದಲ್ಲಿ ನೋಡಿದೆ. ಅರ್ಧ ಗಂಟೆ ಅಥವಾ ಒಂದು ಗಂಟೆಯಲ್ಲಿ ನಾವು ಇಲ್ಲಿಂದ ಹೊರಡುತ್ತೇವೆ. ನಾವು ಮಂಡಿಸಿದ ವಾದವನ್ನು ಸುಪ್ರೀಂ ಕೋಟ್ ಪುರಸ್ಕರಿಸಿದೆ. ಸುಪ್ರೀಂ ಕೋರ್ಟ್ ಸ್ಪೀಕರ್ ಗೆ ಸೂಚನೆ ಕೂಡ ನೀಡಿದೆ. ಮೊದಲಿನಿಂದಲೂ ಸ್ಪೀಕರ್ ನಾನು ಪಾರದರ್ಶಕವಾಗಿ ನಡೆಯುತ್ತೇನೆ ಎಂದು ಹೇಳಿದ್ದರು. ಅವರು ಪಾರದರ್ಶಕವಾಗಿ ನಡೆಯುತ್ತಾರೆ ಎಂಬ ವಿಷಯ ನನಗೆ ಗೊತ್ತು ಎಂದರು.
ನಾವು 10 ಜನ ರಾಜೀನಾಮೆ ನೀಡಿದ್ದೇವೆ. ಅದರಲ್ಲಿ 8 ಜನರ ರಾಜೀನಾಮೆ ಕ್ರಮಬದ್ಧವಾಗಿ ಇದೆ. ಈ ಎಲ್ಲಾ ಗೊಂದಲಕ್ಕೆ ಪರಿಹಾರ ಸಿಗುತ್ತೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವೇನು?
ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ. ಇಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿರುವ 10 ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಅತೃಪ್ತ ಶಾಸಕರು ಬುಧವಾರ ಸ್ಪೀಕರ್ ವಿಳಂಬ ನೀತಿಯನ್ನು ವಿರೋಧಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತರ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡು ವಿಚಾರಣೆ ನಡೆಸಿತು. ಮುಖ್ಯ ನ್ಯಾ.ರಂಜನ್ ಗೊಗಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿತು. ಅತೃಪ್ತರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಕುಲ್ ರೋಹಟಿಗೆ ವಾದವನ್ನು ಆಲಿಸಿತು. ಇತ್ತ ಸಿಎಂ, ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಅವರಿಗೆ ನೋಟಿಸ್ ರವಾನಿಸಿದ್ದು, ನಿಮ್ಮ ವಾದವನ್ನು ಮಂಡಿಸಬಹುದು ಎಂದು ತಿಳಿಸಿದೆ.