ಬೆಂಗಳೂರು: ಕರ್ನಾಟಕದಿಂದ ಕೇರಳಕ್ಕೆ 34 ಕೆಜಿ ಚಿನ್ನವನ್ನು ಅಕ್ರಮವಾಗಿ ಬಸ್ ನಲ್ಲಿ ಸಾಗಿಸುತ್ತಿದ್ದ ತಂಡವನ್ನು ಕೇರಳದ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಚಿನ್ನ ಹಾಗೂ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೇರಳದ ವಯನಾಡಿನ ಅಬಕಾರಿ ಗುಪ್ತ ದಳದ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಸ್ ನಲ್ಲಿ ತಪಾಸಣೆ ನಡೆಸಿದ ವೇಳೆ 4 ಬ್ಯಾಗ್ ಗಳಲ್ಲಿ 34 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ತೋಲ್ಪೆಟ್ಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ 11 ಕೋಟಿ ಮೌಲ್ಯದ 34 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಇಂಟೆಲಿಜೆನ್ಸ್ ಇನ್ಸ್ ಪೆಕ್ಟರ್ ಎ.ಜೆ.ಶಾಜಿ ಹೇಳಿದ್ದಾರೆ. ಅಕ್ರಮ ಚಿನ್ನ ಹಾಗೂ ಮಾದಕ ವಸ್ತುಗಳ ಸಾಗಾಟ ರಾತ್ರಿಕಾಲದಲ್ಲೇ ನಡೆಯುತ್ತವೆ. ಕೇರಳ ಹಾಗೂ ಕರ್ನಾಟಕ ಗಡಿಯಲ್ಲಿ ರಾತ್ರಿ ವೇಳೆಯಲ್ಲಿ ತೆರೆದಿರುವ ಚೆಕ್ ಪೋಸ್ಟ್ ತೋಲ್ಪೆಟ್ಟಿ ಮಾತ್ರ. ಹೀಗಾಗಿ ಯಾವುದೇ ಅಕ್ರಮ ಸಾಗಾಟ ನಡೆದರೂ ಈ ಚೆಕ್ ಪೋಸ್ಟ್ ಮೂಲಕವೇ ನಡೆಯಬೇಕು. ಮುಂಜಾನೆ 4 ಗಂಟೆಗೆ ಈ ದಾರಿಯಲ್ಲಿ ಸಂಚರಿಸುತ್ತಿದ್ದ ಲಕ್ಷುರಿ ಬಸ್ ತಪಾಸಣೆ ವೇಳೆ ನಮಗೆ 34 ಕೆಜಿ ಚಿನ್ನ ಸಿಕ್ಕಿದೆ ಎಂದು ಹೇಳಿದ್ದಾರೆ.
Advertisement
Advertisement
ಬಂಧಿತರನ್ನು ಶಂಕೇಶ್ ಬಿ ಜೈನ್, ಅಭಯ್ ಎಂ ಜೈನ್, ಚಾಂಬರಂ ದೇವಸಿ, ಮದನ್ ಲಾಲ್ ದೇವಸಿ, ವಿಕ್ರಮ್ ಸಿ ಹಾಗೂ ಕಮಲೇಶ್ ಜೈನ್ ಎಂದು ಗುರುತಿಸಲಾಗಿದೆ. ಆರೋಪಿಗಳು 2 ಕಾಲೇಜ್ ಬ್ಯಾಗ್ ಹಾಗೂ 2 ಟ್ರಾವೆಲ್ ಬ್ಯಾಗ್ ಸೇರಿ ಒಟ್ಟು 4 ಬ್ಯಾಗ್ ಗಳಲ್ಲಿ ಯಾರಿಗೂ ಸಂಶಯ ಬಾರದಂತೆ ಪ್ಯಾಕ್ ಮಾಡಿದ್ದರು. ಬಂಧಿತರಲ್ಲಿ ಓರ್ವ ಬೆಂಗಳೂರಿನ ಜ್ಯುವೆಲ್ಲರಿ ಮಳಿಗೆಯೊಂದರ ಮಾಲೀಕರ ಪುತ್ರ ಎಂದು ತನಿಖೆ ವೇಳೆ ಬಯಲಾಗಿದೆ ಎಂದು ಇನ್ಸ್ ಪೆಕ್ಟರ್ ಶಾಜಿ ಹೇಳಿದ್ದಾರೆ.
Advertisement
ಬಂಧಿತರು ಮಾದಕ ವಸ್ತುಗಳನ್ನು ಕೂಡಾ ಅಕ್ರಮವಾಗಿ ಸಾಗಿಸುತ್ತಿದ್ದರು. ಸದ್ಯ ಬಂಧಿತರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಗೂ ಮಾಹಿತಿ ನೀಡಿದ್ದೇವೆ ಎಂದು ಶಾಜಿ ಹೇಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಚಿನ್ನದ ಅಕ್ರಮ ಸಾಗಾಟ ಕೇರಳದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ಚಿನ್ನವನ್ನು ಈ ರೀತಿ ಅಕ್ರಮವಾಗಿ ಸಾಗಾಟ ಮಾಡುತ್ತಾರೆ. 11 ಕೋಟಿ ಮೌಲ್ಯದ ಚಿನ್ನಕ್ಕೆ ಸುಮಾರು 65 ಲಕ್ಷ ತೆರಿಗೆ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಲಿದ್ದಾರೆ.
Advertisement