Dakshina KannadaDistrictsKarnatakaLatestMain Post

ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನಿಂತಿಲ್ಲ ಅಕ್ರಮ ಮರಳು ದಂಧೆ

- ಗಣಿ ಇಲಾಖೆ, ಪೊಲೀಸರ ಸಹಕಾರ

Advertisements

ಮಂಗಳೂರು: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಸುಬ್ರಹ್ಮಣ್ಯದ ತುಂಬಾ ಅಕ್ರಮ ಮರಳು ದಂಧೆಯದ್ದೇ ಕಾರುಬಾರು. ದೇಗುಲಕ್ಕೆ ಆಗಮಿಸುವ ಭಕ್ತರು ತೀರ್ಥ ಸ್ನಾನಗೈಯುವ ಪರಮ ಪವಿತ್ರ ಕುಮಾರಧಾರ ನದಿಯ ಎಲ್ಲೆಂದರಲ್ಲಿ ಮರಳಿಗಾಗಿ ಅಕ್ರಮ ದಂಧೆಕೋರರು ಹಿಟಾಚಿ, ಡ್ರೆಜ್ಜಿಂಗ್ ಮೆಷಿನ್ ಬಳಸಿ ನದಿಯೊಡಲು ಬರಿದು ಮಾಡುತ್ತಿದ್ದು ಅಕ್ರಮ ಮಟ್ಟ ಹಾಕಬೇಕಾದ ಸುಬ್ರಹ್ಮಣ್ಯ ಪೊಲೀಸರು, ಗಣಿ ಇಲಾಖೆ ಅಧಿಕಾರಿಗಳು ಎಲ್ಲಾ ಗೊತ್ತಿದ್ದೂ ಮೌನವಹಿಸಿರುವ ಆರೋಪ ಕೇಳಿಬಂದಿದೆ.

ವಿವಿಧ ಇಲಾಖೆಗಳಿಗೆ ತಿಂಗಳ ಮಾಮೂಲಿಯಿಂದಲೇ ನಡೆಯುತ್ತಿರುವ ದಂಧೆಗೆ ಬ್ರೇಕ್ ಹಾಕೋರು ಯಾರು ಅನ್ನೋದು ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರ ಪ್ರಶ್ನೆಯಾಗಿದೆ. ಪಂಜ ಏನೆಕಲ್ಲು ಮಾರ್ಗವಾಗಿ ಸಾಗುವಾಗ ಕುಮಾರಧಾರ ಸೇತುವೆಗಿಂತ ಮುಂದೆ ಪರ್ವತ ಮುಖಿ ಬಳಿಯ ಸರಕಾರಿ ಆಸ್ಪತ್ರೆಯ ಮಾರು ದೂರದಲ್ಲೇ ಅಕ್ರಮ ಮರಳುಗಾರಿಕೆ ನಿತ್ಯ ನಿರಂತರ ನಡೆಯುತ್ತಿದೆ. ಸಂಜೆ 6 ಗಂಟೆಯಿಂದ ಶುರುವಾಗುವ ಮರಳು ಸಾಗಾಟ ಮುಂಜಾನೆ 6 ಗಂಟೆಯವರೆಗೂ ನಡೆಯುತ್ತಿದೆ. ಇಲ್ಲಿಂದ ಪ್ರತಿನಿತ್ಯ ನೂರಾರು ಲೋಡ್‍ಗಳಷ್ಟು ಮರಳು ಸಕಲೇಶಪುರ ಮಾರ್ಗವಾಗಿ ಹಾಸನ, ಬೆಂಗಳೂರು ಕಡೆಗೂ ಸಾಗಾಟವಾಗುತ್ತಿದೆ. ಇಲ್ಲಿ ಬಟಾಬಯಲಾಗಿ ಮರಳು ಹೊತ್ತ ಲಾರಿಗಳು ಸಾಗುತ್ತಿದ್ದರೂ ಪೊಲೀಸ್ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳು ದಂಧೆ ನಿಲ್ಲಿಸಲು ಮುಂದಾಗದೇ ಇರುವುದು ಜನರ ಸಂದೇಹಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮಾರ್ಚ್‍ನಲ್ಲಿ GST ದಾಖಲೆ ಸಂಗ್ರಹ – ಯಾವ ರಾಜ್ಯದಲ್ಲಿ ಎಷ್ಟು ಸಂಗ್ರಹ?

ಇಲ್ಲಿ ಮಾತ್ರವಲ್ಲದೆ ಸುಬ್ರಹ್ಮಣ್ಯ ಸುತ್ತಮುತ್ತ ಹತ್ತಾರು ಕಡೆಗಳಲ್ಲಿ ನದಿಯಿಂದ ಮರಳು ತೆಗೆಯಲಾಗುತ್ತಿದೆ. ಕುಲ್ಕುಂದ ಸಮೀಪದ ಮೈಸೂರು ಕೆಫೆ ಲಾಡ್ಜ್ ಪಕ್ಕದಲ್ಲಿ ಹಾದುಹೋಗುವ ರಸ್ತೆಯಲ್ಲಿ ಮರಳು ಲಾರಿಗಳ ಆರ್ಭಟ ಮಿತಿಮೀರಿದ್ದು ನದಿಯಲ್ಲಿ ಸಂಜೆಯಾಗುತ್ತಿದ್ದಂತೆ ಮರಳು ಲೋಡ್ ಮಾಡಲಾಗುತ್ತಿದೆ. ಲಾರಿಗಳ ಬೇಕಾಬಿಟ್ಟಿ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರ ವಾಹನ ಓಡಾಟಕ್ಕೆ ಸಂಚಕಾರ ಉಂಟಾಗಿದೆ. ಸ್ಥಳೀಯರು ಅನೇಕ ಬಾರಿ ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್‍ಗೆ ದೂರು ನೀಡಿದ್ದರೂ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಎಂದು ವಿದ್ಯಾರ್ಥಿಯ ಕೈ ಕಚ್ಚಿದ ಉಪನ್ಯಾಸಕ

ಜಿಲ್ಲೆಯಲ್ಲಿ ಕಾನೂನು ರೀತಿಯಲ್ಲಿ ಸರ್ಕಾರಕ್ಕೆ ರಾಜಾಧನ ಪಾವತಿಸಿ ಮರಳುಗಾರಿಕೆ ನಡೆಸುತ್ತಿರುವವರು ಅಕ್ರಮ ದಂಧೆಕೋರರ ಹಾವಳಿಯಿಂದ ಕಂಗಲಾಗಿದ್ದಾರೆ. ಪರ್ಮಿಟ್, ಟ್ಯಾಕ್ಸ್ ಎಲ್ಲಾ ಕಟ್ಟಿಯೂ ಕೂಡಾ ಇಲಾಖೆ ಅಕ್ರಮ ವ್ಯವಹಾರ ನಡೆಸುವವರ ಪರವಾಗಿ ನಿಂತಿದೆ ಎಂದು ಆರೋಪಿಸುತ್ತಿದ್ದಾರೆ. ಮಾರ್ಚ್ ತಿಂಗಳ ಅಂತ್ಯಕ್ಕೆ ವಾರ್ಷಿಕ ಲೆಕ್ಕದ ಕಾರಣಕ್ಕೆ ಮರಳುಗಾರಿಕೆ ಪರ್ಮಿಟ್ ಮೂರು ದಿನಗಳ ಕಾಲ ಇಲಾಖೆ ಬ್ಲಾಕ್ ಮಾಡಿದ್ದರೂ ಇಲ್ಲಿ ಮಾತ್ರ ಯಥಾಪ್ರಕಾರ ಮರಳು ಸಾಗಾಟವಾಗಿದೆ. ಉಪ್ಪಿನಂಗಡಿ, ಕಡಬ, ಬೆಳ್ತಂಗಡಿ, ಸುಬ್ರಹ್ಮಣ್ಯ, ಸುಳ್ಯ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕಂಡು ಜನರು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ರೋಸಿಹೋಗಿದ್ದು ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಈ ಕೂಡಲೇ ದಂಧೆಯನ್ನು ಸಂಪೂರ್ಣ ಮಟ್ಟ ಹಾಕುವ ಮೂಲಕ ಜನರ ವಿಶ್ವಾಸವನ್ನು ಉಳಿಸಬೇಕಾಗಿದೆ.

Leave a Reply

Your email address will not be published.

Back to top button