ರಾಮನಗರ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆಕೋರರ ಕರ್ಮಕಾಂಡ ಎಗ್ಗಿಲ್ಲದೇ ನಡೆಯುತ್ತಿದ್ದು, ನದಿಪಾತ್ರಗಳಲ್ಲೇ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೂಲಕ ಮರಳುಗಾರಿಕೆ ನಡೆಸುತ್ತಿದ್ದಾರೆ.
ಮಳೆಯಿಂದ ಅರ್ಕಾವತಿ ನದಿ ಪಾತ್ರದಲ್ಲಿಯೇ ನೀರು ಹರಿಯುತ್ತಿದ್ದಂತೆ ದಂಧೆಕೋರರು ಬಾಲ ಬಿಚ್ಚಿದ್ದು, ಅರ್ಕಾವತಿ ನದಿ ಪಾತ್ರದಲ್ಲಿ ಅಡ್ಡೆಗಳನ್ನು ನಿರ್ಮಿಸಿಕೊಂಡು ಮರಳು ಫಿಲ್ಟರ್ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ರಾಜರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ. ನದಿಯಲ್ಲಿ ಮರಳುಗಾರಿಕೆ ನಡೆಸುವುದರ ಜೊತೆಗೆ ಬೇರೊಂದು ಸ್ಥಳಗಳಿಂದ ಮಣ್ಣು ಮಿಶ್ರಿತ ಮರಳನ್ನು ತಂದು ಅರ್ಕಾವತಿ ನದಿಯಲ್ಲಿ ದಂಧೆಕೋರರು ಫಿಲ್ಟರ್ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ರವಿ ಹೇಳಿದ್ದಾರೆ.
ಅಕ್ರಮ ಮರಳುಗಾರಿಕೆ ತಡೆಗಟ್ಟುವ ವಿಷಯದಲ್ಲಿ ಸಂಬಂಧಿಸಿದ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸೋದನ್ನೇ ಕೈಬಿಟ್ಟಿದೆ. ಹೊಸ ಜಿಲ್ಲಾಧಿಕಾರಿ ಬಂದರೂ ಮರಳುಗಾರಿಕೆಗೆ ತಡೆ ಹಾಕುತ್ತಾರೆ ಅಂದರೆ ಕಚೇರಿ ಬಿಟ್ಟು ಹೊರಗೆ ಬರುವುದೇ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ತಡೆಗಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಎಲ್ಲಿಯೂ ಚೆಕ್‍ಪೋಸ್ಟ್ ಗಳಾಗಲಿ, ತಪಾಸಣೆಯಾಗಲಿ ನಡೆಯುತ್ತಿಲ್ಲ. ಅಧಿಕಾರಿಗಳಂತೂ ತಾವಾಯ್ತು, ತಮ್ಮ ಕಚೇರಿಯಾಯ್ತು ಎಂದು ತಿರುಗಾಡುತ್ತಾ ಇರುವುದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv