ಶ್ರೀನಿವಾಸ್ ಪ್ರತಿಭಾ ಬಾಲಕೃಷ್ಣ
ಬೆಂಗಳೂರು: ಪ್ರೀತಿಸಿ ಮದುವೆಯಾಗಿ ಮಕ್ಕಳಿದ್ದರೂ ಅನೈತಿಕ ಸಂಬಂಧದಿಂದ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.
Advertisement
ಬಾಗೇಪಲ್ಲಿ ಮೂಲದ ಶ್ರೀನಿವಾಸ್ (30) ಕೊಲೆಯಾದ ವ್ಯಕ್ತಿ. ಪತ್ನಿ ಪ್ರತಿಭಾ ತನ್ನ ಪ್ರಿಯಕರ ಬಾಲಕೃಷ್ಣ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಸದ್ಯಕ್ಕೆ ಪೊಲೀಸರು ಪ್ರತಿಭಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಬಾಗೇಪಲ್ಲಿ ನಿವಾಸಿ ಪ್ರತಿಭಾ ಹತ್ತು ವರ್ಷದ ಹಿಂದೆ ಅದೇ ಊರಿನ ಶ್ರೀನಿವಾಸ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಳು. ನಂತರ ದಂಪತಿ ಬೆಂಗಳೂರಿನ ಆನೇಕಲ್ ತಾಲೂಕಿನ ಹಿಲಲಿಗೆ ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಶ್ರೀನಿವಾಸ್ ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿದ್ದನು. ಆದರೆ ಪ್ರತಿಭಾ ಇತ್ತೀಚೆಗೆ ಪಕ್ಕದ ಮನೆಯ ಬಾಲಕೃಷ್ಣನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಶ್ರೀನಿವಾಸ್‍ಗೆ ತಿಳಿದು ಗಲಾಟೆ ನಡೆದು ಪ್ರತಿಭಾಗೆ ಬುದ್ಧಿ ಹೇಳಿದ್ದನು. ಶ್ರೀನಿವಾಸ್ ಬುದ್ಧಿ ಹೇಳಿದ್ದರೂ ಪ್ರತಿಭಾ ಶ್ರೀನಿವಾಸ್ ಕೆಲಸಕ್ಕೆ ಹೋದ ಬಳಿಕ ಬಾಲಕೃಷ್ಣನ ಜೊತೆ ಸಂಬಂಧ ಹೊಂದುತ್ತಿದ್ದಳು.
Advertisement
ಶನಿವಾರ ಶ್ರೀನಿವಾಸ್ ತನ್ನ ಪತ್ನಿಯ ಕಾಮದಾಟವನ್ನು ಕಣ್ಣಾರೆ ಕಂಡು ಗಲಾಟೆ ಮಾಡಿ ಕೆಲಸಕ್ಕೆ ಹೋಗಿದ್ದಾನೆ. ಇತ್ತ ಪ್ರತಿಭಾ ಹಾಗೂ ಬಾಲಕೃಷ್ಣ ಶ್ರೀನಿವಾಸ್ ನನ್ನು ಮುಗಿಸುವ ನಿರ್ಧಾರ ಮಾಡಿದ್ದು, ಕೆಲಸದಿಂದ ಬಂದ ಶ್ರೀನಿವಾಸ್‍ನನ್ನು ಪ್ರತಿಭಾ ಕೆಲಸವಿದೆಂದು ಚಂದಾಪುರ ಸಮೀಪದ ಸೂರ್ಯನಗರ ಬಿಎಂಟಿಸಿ ಬಸ್ ಡಿಪೋ ಬಳಿ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿಗೆ ಬಾಲಕೃಷ್ಣ ಸಹ ತನ್ನ ಪತ್ನಿ ಲಕ್ಷ್ಮೀದೇವಿಯೊಂದಿಗೆ ಸ್ಥಳಕ್ಕೆ ಬಂದು ಪ್ರತಿಭಾ ಹಾಗೂ ಬಾಲಕೃಷ್ಣ ಸೇರಿ ಶ್ರೀನಿವಾಸ್‍ನನ್ನು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಮೃತ ಶ್ರೀನಿವಾಸ್ ಸಹೋದರ ಮಧು ತಿಳಿಸಿದ್ದಾರೆ.
ಪತಿಯನ್ನು ಕೊಂದ ಪ್ರತಿಭಾ ತನ್ನ ಪ್ರಿಯಕರನೊಂದಿಗೆ ಸೇರಿ ಆತನ ಪತ್ನಿಯನ್ನು ಮುಗಿಸಲು ಮುಂದಾಗಿದ್ದಳು. ಆದರೆ ಆಕೆ ಬಳಿಯಿದ್ದ ಪುಟ್ಟ ಮಗುವನ್ನು ನೋಡಿ ಕೊಲೆ ಮಾಡದೆ ಸ್ಮಶಾನವೊಂದರಲ್ಲಿ ಬಿಟ್ಟು ತೆರಳಿದ್ದಾರೆ. ನಂತರ ಪ್ರತಿಭಾ ಬಾಲಕೃಷ್ಣ ವಾಹನವೊಂದರಲ್ಲಿ ಶ್ರೀನಿವಾಸ್‍ನ ಶವವನ್ನು ಕೊಂಡೊಯ್ದು ಕೆರೆಗೆ ಎಸೆದು ಏನು ತಿಳಿಯದವಳಂತೆ ಮನೆ ಸೇರಿದ್ದಾಳೆ. ಘಟನೆ ಬಳಿಕ ಬಾಲಕೃಷ್ಣ ತಲೆ ಮರೆಸಿಕೊಂಡಿದ್ದನು.
ಪ್ರತಿಭಾ ತಾನಿದ್ದ ಮನೆಯ ಮಾಲೀಕನ ಬಳಿ ಇದ್ದಕಿದ್ದಂತೆ ಲೀಸ್ ಹಣವನ್ನು ಕೊಡುವಂತೆ ಕೇಳಿದ್ದಾಳೆ. ಶ್ರೀನಿವಾಸ್ ಕಾಣದೆಯಿದ್ದು ಪ್ರತಿಭಾ ಹಣ ಕೇಳುತ್ತಿದ್ದರಿಂದ ಅನುಮಾನ ಬಂದ ಮನೆ ಮಾಲೀಕ ಶ್ರೀನಿವಾಸನ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಅಷ್ಟರಲ್ಲಿ ಬಾಲಕೃಷ್ಣನ ಪತ್ನಿ ಲಕ್ಷ್ಮಿದೇವಿ ನಡೆದ ವಿಚಾರವನ್ನು ಮನೆ ಮಾಲೀಕನಿಗೆ ತಿಳಿಸಿದ್ದು, ಮಾಲೀಕನ ನೆರವಿನೊಂದಿಗೆ ಸೂರ್ಯ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯಸಿಟಿ ಪೊಲೀಸರು ಪ್ರತಿಭಾಳನ್ನು ಶವ ಎಸೆದ ಜಾಗ ತೋರಿಸುವಂತೆ ಕೇಳಿದರೆ ಕತ್ತಲೆಯಲ್ಲಿ ಯಾವ ಕೆರೆಯಲ್ಲಿ ಎಸೆದಿದ್ದೇವೋ ತಿಳಿಯುತ್ತಿಲ್ಲ ಎನ್ನುತ್ತಿದ್ದಾಳೆ. ಇತ್ತ ಬಾಲಕೃಷ್ಣ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ಇಲ್ಲಿಯವರೆಗೆ ಶ್ರೀನಿವಾಸ್ ಶವ ಪತ್ತೆಯಾಗಲಿಲ್ಲ.