ರಾಮನಗರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದ ಪ್ರಜ್ವಲ್ ಕೊಲೆಯಾದ ಬಾಲಕ. ಪ್ರಜ್ವಲ್ ತಾಯಿ ವರಲಕ್ಷ್ಮಿ ಹಾಗೂ ಪ್ರಿಯಕರ ಕುಮಾರ್ ಕೊಲೆ ಮಾಡಿ, ಮೃತ ದೇಹವನ್ನು ಹೂತಿಟ್ಟಿದ್ದ ಆರೋಪಿಗಳು. ಈ ಘಟನೆಯು ಇದೇ ತಿಂಗಳ 4ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿದೆ ಬಂದಿದೆ.
ಆಗಿದ್ದೇನು?:
ವರಲಕ್ಷ್ಮಿ ಪತಿ ಮೃತಪಟ್ಟಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಆಕೆ ಕುಮಾರ್ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಯಾರಿಗೂ ಗೊತ್ತಾಗದಂತೆ ಇವರಿಬ್ಬರು ಜಾಲಮಂಗಲ ಸಮೀಪದ ತೋಟವೊಂದರಲ್ಲಿ ಮಾರ್ಚ್ 4ರಂದು ಕುಳಿತಿದ್ದರು. ತಾಯಿಯ ಜೊತೆಗೆ ಕುಮಾರ್ ಕುಳಿತಿದ್ದನ್ನು ಬಾಲಕ ಪ್ರಜ್ವಲ್ ನೋಡಿದ್ದ. ಇದೇ ವೇಳೆ ಅಲ್ಲಿಗೆ ಬಂದಿದ್ದ ಪ್ರಜ್ವಲ್‍ನನ್ನು ನೋಡಿದ ಕುಮಾರ್, ಓಡಿ ಬಂದು ಹಿಡಿದುಕೊಂಡಿದ್ದ. ಹಾಗೇ ಬಿಟ್ಟರೆ ನಮ್ಮ ಸಂಬಂಧದ ಮನೆಯವರಿಗೆ ತಿಳಿಯುತ್ತದೆ ಎಂದು ಪ್ರಜ್ವಲ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಅಸ್ವಸ್ಥಗೊಂಡು ಬಿದ್ದಿದ್ದ ಪ್ರಜ್ವಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಇದರಿಂದ ಗಾಬರಿಗೊಂಡ ಆರೋಪಿಗಳು ತಕ್ಷಣವೇ ಪ್ರಜ್ವಲ್ ಮೃತದೇಹವನ್ನು ತೋಟದಲ್ಲಿ ಹೂತು ಅಲ್ಲಿಂದ ಪರಾರಿಯಾಗಿದ್ದರು.
ಮೊಮ್ಮಗ ಪ್ರಜ್ವಲ್ ಮನೆಗೆ ಬಾರದೇ ಇದ್ದಾಗ ಜಯಮ್ಮನಿಗೆ ಅನುಮಾನ ಬಂದಿದೆ. ಈ ಸಂಬಂಧ ಜಯಮ್ಮ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಅಕ್ಕನ ಮನೆಯಲ್ಲಿ ಇದ್ದೇನೆ. ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ಸೊಸೆ ವರಲಕ್ಷ್ಮಿ ಹೇಳುತ್ತಿದ್ದಳು. ಆದರೆ ಕುಮಾರ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪ್ರಜ್ವಲ್‍ನ ತಮ್ಮ ಮನೆಗೆ ಬಂದು ಹೇಳಿದಾಗ ಸೊಸೆಯ ಕೃತ್ಯ ನನಗೆ ತಿಳಿಯಿತು ಎಂದು ಅಜ್ಜಿ ಜಯಮ್ಮ ದೂರಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಪ್ರಜ್ವಲ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv