ಮಂಡ್ಯ: ಕೂಲಿ ಅರಸಿ ನೂರಾರು ಕಿಲೋಮೀಟರ್ ದೂರದಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ಕಾರ್ಮಿಕರ ಬದುಕನ್ನು ಅಕ್ರಮ ಗಣಿಗಾರಿಕೆ ಕಿತ್ತುಕೊಂಡಿದೆ. ಅಕ್ರಮ ಕಲ್ಲುಗಣಿಕಾರಿಕೆ ಮಾಲೀಕರ ಕೈಗೆ ಸಿಕ್ಕ ಕಾರ್ಮಿಕರ ಬದುಕು ಈಗ ಅಕ್ಷರಶಃ ನರಕವಾಗಿದೆ. ಕಲ್ಲುಗಣಿಯಲ್ಲಿ ನಡೆದ ಅಕ್ರಮ ಸ್ಫೋಟಕ್ಕೆ ಕಣ್ಣು, ಕಿವಿಗಳನ್ನೇ ಕಳೆದುಕೊಂಡಿರುವ ಬಡ ಕೂಲಿ ಕಾರ್ಮಿಕರ ಕುಟುಂಬ ಬೀದಿಗೆ ಬಿದ್ದಿದೆ. ಇದೀಗ ಅನ್ಯಾಯಕ್ಕೊಳಗಾಗಿರುವ ಕುಟುಂಬ ನ್ಯಾಯಕ್ಕಾಗಿ ಕಣ್ಣೀರುಡುತ್ತಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ನಿವಾಸಿಗಳು ಮೇಸ್ತ್ರಿ ಚಂದ್ರು ಪೋಮಪ್ಪ ಲಮಾಣಿ ಎಂಬಾತನ ಮಾತನ್ನು ನಂಬಿ ರಮೇಶ್, ರವಿ, ರಾಜು ಎಂಬ ಮೂವರು ಕೆಲಸ ಅರಸಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು. ಮೇಸ್ತ್ರಿ ಚಂದ್ರು ಪೋಮಪ್ಪ ಲಮಾಣಿ ಮೂವರಿಗೂ ಶ್ರೀರಂಗಪಟ್ಟಣ ತಾಲೂಕಿನ ಮುಂಡಗದೊರೆ ಗ್ರಾಮದ ಹೊರವಲಯದಲ್ಲಿರುವ ಎಂಸಿ.ಮರಿಯಪ್ಪ ಎಂಬವರ ಕಲ್ಲು ಕ್ವಾರಿಯಲ್ಲಿ ಕೆಲಸ ಕೊಡಿಸಿದ್ದನು. ದಿನಾಂಕ 24-05-2019 ರಂದು ಕಲ್ಲು ಗಣಿಗಾರಿಕೆಯಲ್ಲಿ ನಡೆದ ಅಕ್ರಮ ಸ್ಫೋಟಕ್ಕೆ ರಮೇಶ್ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ರವಿಗೆ ಎರಡು ಕಿವಿಗಳು ಕೇಳದಂತಾಗಿವೆ. ರಾಜು ಸೇರಿದಂತೆ ಮೂವರಿಗೂ ಗಂಭೀರ ಗಾಯವಾಗಿ ಈಗಷ್ಟೇ ಸ್ವಲ್ಪ ಚೇತರಿಕೆ ಕಾಣುತ್ತಿದ್ದು ಇವರನ್ನೇ ನಂಬಿದ್ದ ಮೂವರ ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ಸಹಾಯ ಮಾಡಬೇಕಾದ ಗಣಿಮಾಲೀಕ ಬಿಡಿಗಾಸು ನೀಡದೇ ಬೀದಿಗೆ ತಳ್ಳಿದ್ದಾನೆ.
Advertisement
Advertisement
ಶ್ರೀರಂಗಪಟ್ಟಣ ಸುತ್ತಮುತ್ತ ನಡೆಯುವ ಗಣಿಗಾರಿಕೆಗಳಿಂದ ಕೆಆರ್‍ಎಸ್ ಅಣೆಕಟ್ಟೆಗೆ ತೊಂದರೆಯಾಗುತ್ತೆ ಎಂಬ ಕಾರಣಕ್ಕೆ ಯಾವುದೇ ಸ್ಫೋಟಕಗಳನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡುವ ಗಣಿ ಮಾಲೀಕರು ಬೋರ್‍ವೆಲ್ ಕುಳಿಗಳನ್ನು ತೋಡಿ, ಅಕ್ರಮವಾಗಿ ಬೃಹತ್ ಪ್ರಮಾಣದ ಸ್ಪೋಟಕ ತುಂಬಿ ಬ್ಲಾಸ್ಟ್ ಮಾಡುತ್ತ ನಿರಂತರವಾಗಿ ಗಣಿಗಾರಿಕೆ ನಡೆಸುತ್ತಲೇ ಬಂದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ರೀತಿಯ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ತಮಗೆ ಬರುವ ಮಾಮೂಲಿ ಪಡೆದು ಕರ್ತವ್ಯ ಮರೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
Advertisement
ಇಂದು ಅಕ್ರಮ ಸ್ಫೋಟಕ್ಕೆ ಮೂವರು ಕೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬದವರು ಪ್ರತಿ ದಿನದ ಖರ್ಚಿಗೂ ಹಣವಿಲ್ಲದೇ ಸಂಕಟ ಪಡುತ್ತಿದ್ದಾರೆ. ಪ್ರಭಾವಿಯಾದ ಗಣಿ ಮಾಲೀಕ ಎಂಸಿ.ಮರಿಯಪ್ಪ ಕಾರ್ಮಿಕರ ಯೋಗಕ್ಷೇಮ ನೋಡದೇ, ಧನ ಸಹಾಯವನ್ನೂ ಮಾಡದೇ ತನ್ನ ಪಾಡಿಗೆ ತಾನು ಆರಾಮವಾಗಿದ್ದಾನೆ ಎಂದು ಕಾರ್ಮಿಕರು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
Advertisement
ಕೆಆರ್‍ಎಸ್ ಅಣೆಕಟ್ಟು ಸುತ್ತಮುತ್ತ ನಡೆಯುವ ಕಲ್ಲು ಗಣಿಗಾರಿಕೆಯ ಅಕ್ರಮ ಸ್ಫೋಟದಿಂದ ಅಣೆಕಟ್ಟೆಗೆ ತೊಂದರೆ ಆಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಆ ರೀತಿಯ ಯಾವುದೇ ಸ್ಫೋಟ ನಡೆಯುತ್ತಲೇ ಇಲ್ಲ ಎಂಬ ಮಾತುಗಳನ್ನಾಡುತ್ತಿದ್ದರು. ಇದೀಗ ಅದೇ ಅಕ್ರಮ ಸ್ಫೋಟಕ್ಕೆ ಮೂರು ಜನ ಬಡ ಕೂಲಿಕಾರ್ಮಿಕರ ಬದುಕೇ ನಾಶವಾಗಿದೆ. ಇನ್ನಾದ್ರು ಸರ್ಕಾರ ಇತ್ತ ಗಮನಹರಿಸಿ ಭ್ರಷ್ಟ ಅಧಿಕಾರಿಗಲು, ಗಣಿಮಾಲೀಕರಿಗೆ ಶಿಕ್ಷೆ ನೀಡಿ, ಅನ್ಯಾಯಕ್ಕೊಳಗಾಗರುವ ಬಡ ಕೂಲಿ ಕಾರ್ಮಿಕರ ಹಿತ ಕಾಯಬೇಕಾಗಿದೆ.
ಕೆಲವು ದಿನಗಳ ಹಿಂದೆ ಸಂಸದೆ ಸುಮಲತಾ ಅಂಬರೀಶ್, ಅಕ್ರಮ ಗಣಿಗಾರಿಕೆ ಕಡಿವಾಣ ಹಾಕಬೇಕಿದೆ. ಕೆಆರ್ ಎಸ್ ಆಣೆಕಟ್ಟಿನ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಸ್ಫೋಟದಿಂದ ಆಣೆಕಟ್ಟಿಗೆ ಹಾನಿಯುಂಟಾಗುತ್ತಿದೆ ಎಂದು ಲೋಕಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.