ನವದೆಹಲಿ: ಭಾರತದ ಕುಸ್ತಿ ಅಖಾಡದಲ್ಲಿ ಪ್ರಶಸ್ತಿ ವಾಪ್ಸಿ ಚಳುವಳಿ ಮುಂದುವರಿದಿದೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಆಪ್ತ ಸಂಜಯ್ ಸಿಂಗ್ (Sanjay Singh) ಭಾರತೀಯ ಕುಸ್ತಿ ಫೆಡರೇಷನ್ (WFI) ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ವಿರೋಧಿಸಿ ಕುಸ್ತಿಪಟು ವೀರೇಂದ್ರ ಸಿಂಗ್ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.
ನನ್ನ ಸಹೋದರಿ ಮತ್ತು ದೇಶದ ಪುತ್ರಿಗಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ. ನಿಮ್ಮ ಮಗಳು ಮತ್ತು ನನ್ನ ಸಹೋದರಿ ಸಾಕ್ಷಿ ಮಲಿಕ್ (Sakshee Malikkh) ಅವರ ಬಗ್ಗೆ ನನಗೆ ಹೆಮ್ಮೆ ಇದೆ. ನೀವೂ ನಿರ್ಧಾರ ಕೈಗೊಳ್ಳಿ ಎಂದು ನಾನು ದೇಶದ ಅಗ್ರ ಆಟಗಾರರಿಗೂ ಸಹ ವಿನಂತಿಸುತ್ತೇನೆ ಎಂದು ವೀರೇಂದ್ರ ಸಿಂಗ್ (Virender Singh), ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಆಪ್ತನಿಗೆ ಕುಸ್ತಿ ಅಧ್ಯಕ್ಷ ಪಟ್ಟ – ವಿರೋಧಿಸಿ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ಬಜರಂಗ್ ಪುನಿಯಾ
Advertisement
Advertisement
ಕುಸ್ತಿಪಟು ಬಜರಂಗ್ ಪುನಿಯಾ ಅವರು ಶುಕ್ರವಾರ ಸರ್ಕಾರಕ್ಕೆ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ್ದರು. ಅವರ ಬೆನ್ನಲ್ಲೇ ವೀರೇಂದ್ರ ಸಿಂಗ್ ಇಂದು ಪ್ರಶಸ್ತಿ ವಾಪಸ್ ಮಾಡಿದ್ದಾರೆ. ಸಂಜಯ್ ಸಿಂಗ್ ಆಯ್ಕೆ ವಿರೋಧಿಸಿ ಸಾಕ್ಷಿ ಮಲಿಕ್ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ ಬೆಂಬಲ ಸೂಚಿಸಿದ್ದಾರೆ.
Advertisement
Advertisement
ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಗುರುವಾರ ಕುಸ್ತಿಗೆ ವಿದಾಯ ಹೇಳಿದ್ದಾರೆ. ಸುದ್ದಿಗೋಷ್ಠಿ ವೇಳೆ ಶೂಗಳನ್ನು ಬಿಚ್ಚಿ ಟೇಬಲ್ ಮೇಲಿಟ್ಟು ಕಣ್ಣೀರಿಡುತ್ತಾ ಕುಸ್ತಿಗೆ ಸಾಕ್ಷಿ ವಿದಾಯ ಹೇಳಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ಆಪ್ತ ಕುಸ್ತಿ ಅಧ್ಯಕ್ಷ: ಶೂ ಬಿಚ್ಚಿಟ್ಟು, ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್!
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ವಿಜೇಂದರ್ ಸಿಂಗ್ ಕೂಡ ನಿನ್ನೆ ಮಲಿಕ್‌ಗೆ ಬೆಂಬಲ ಘೋಷಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತರಿಗೆ ನ್ಯಾಯ ನೀಡದಿದ್ದರೆ, ನಾವು ಅದನ್ನು ಹೇಗೆ ಪಡೆಯೋದು ಎಂದು ಹೆಣ್ಣುಮಕ್ಕಳ ಪೋಷಕರು ಚಿಂತಿತರಾಗಿದ್ದಾರೆ. ಪ್ರಧಾನಿ, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಎಲ್ಲರೂ ಬಂದು ಇದು ಏಕೆ ಸಂಭವಿಸಿತು ಎಂದು ಉತ್ತರಿಸಬೇಕು. ಇಂಥ ಬೆಳವಣಿಗೆಗಳು ನ್ಯಾಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಯ ಮೇಲೆ ಸಾಕಷ್ಟು ಪ್ರಶ್ನೆ ಹುಟ್ಟುಹಾಕುತ್ತದೆ ಎಂದು ವಿಜೇಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.