ಬೆಂಗಳೂರು: ಐಐಐಟಿ ವಿದ್ಯಾರ್ಥಿಯೋರ್ವ ಹಾಸ್ಟೆಲ್‍ನ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಗರದ ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿಯ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.
ಆಂಧ್ರ ಮೂಲದ ಸಾಯಿಶರತ್ (22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸಾಯಿಶರತ್ ಐಐಐಟಿಯಲ್ಲಿ 4ನೇ ವರ್ಷದ ಇನ್ಟಿಗ್ರೇಟೆಡ್ ಎಂಟೆಕ್ ವ್ಯಾಸಂಗ ಮಾಡುತ್ತಿದ್ದನು. ಇಂದು ಬೆಳಗಿನ ಜಾವ ಸ್ನೇಹಿತರೆಲ್ಲಾ ಗಾಢ ನಿದ್ರೆಯಲ್ಲಿರುವಾಗ 5 ಗಂಟೆಗೆ ವಿದ್ಯಾರ್ಥಿ ನಿಲಯದ ಏಳನೇ ಮಹಡಿಯಿಂದ ಸಾಯಿಶರತ್ ಹಾರಿದ್ದಾನೆ.
ಸಾಯಿಶರತ್ ತಂದೆ ಕೋದಂಡರೆಡ್ಡಿ ಆಂಧ್ರ ಪ್ರದೇಶದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದು, ಆರ್ಥಿಕವಾಗಿ ಸ್ಥಿತಿವಂತರೇ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಾಯಿಶರತ್ ಉತ್ತಮ ವಿದ್ಯಾರ್ಥಿಯಾಗಿದ್ದನೆಂದು ಕಾಲೇಜಿನವರು ತಿಳಿಸಿದ್ದಾರೆ.
ಸಾಯಿಶರತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಹುಶಃ ಓದಿನ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಾಯಿಶರತ್ ಪೋಷಕರಿಗೆ ವಿಷಯ ತಿಳಿಸಿದ್ದಾರೆ.