– ಸುಟ್ಟ ವಾಸನೆ ಬರ್ತಿದ್ರೂ ಸಿಗರೇಟ್ ಸೇದೋದ್ರಲ್ಲಿ ಬ್ಯುಸಿಯಾಗಿದ್ರು ಅಂತಾ ಆರೋಪ
ಲಕ್ನೋ: ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ (Yamuna Expressway) ಚಲಿಸುತ್ತಿದ್ದ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಳ್ಳುವ ಕೆಲವೇ ಕ್ಷಣಗಳ ಮೊದಲು ಚಾಲಕನ ಕ್ಯಾಬಿನ್‌ನಿಂದ ಸುಟ್ಟ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ಎಚ್ಚರಿಸಿದ್ದರೂ, ಚಾಲಕ ಬಸ್ ನಿಲ್ಲಿಸದೆ ಮುಂದುವರಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ದಾಖಲಾಗಿರುವ ಎಫ್‌ಐಆರ್‌ನಲ್ಲಿ (FIR) ಸುಮಾರು 30 ರಿಂದ 35 ಪ್ರಯಾಣಿಕರು ಬಸ್‌ನಲ್ಲಿದ್ದರು ಎಂದು ಉಲ್ಲೇಖಿಸಲಾಗಿದೆ. ದುರಂತದಲ್ಲಿ 9 ಪ್ರಯಾಣಿಕರು ಮೃತಪಟ್ಟಿದ್ದು, ಹಲವರಿಗೆ ಸುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ದೆಹಲಿ ಗ್ಯಾಂಗ್‌ರೇಪ್ ಕೇಸ್ | ಸರ್ಚ್ ಹಿಸ್ಟರಿ ಡಿಲೀಟ್, ಬಟ್ಟೆ ವಾಶ್ – ಸಾಕ್ಷ್ಯ ನಾಶಕ್ಕೆ ಆರೋಪಿಗಳಿಂದ ಮಾಸ್ಟರ್ ಪ್ಲ್ಯಾನ್!
ಹಮೀರ್‌ಪುರ ಜಿಲ್ಲೆಯ ಸುನೀಲ್ ಕುಮಾರ್ ಎಂಬುವರು ಜೇವರ್ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಬುಧವಾರ ರಾತ್ರಿ ಸುಮಾರು 11.30ರ ವೇಳೆಗೆ ಯಮುನಾ ಎಕ್ಸ್‌ಪ್ರೆಸ್‌ವೇನ 33ನೇ ಕಿಲೋಮೀಟರ್ ಬಳಿ ಬಸ್ ಸಾಗುತ್ತಿದ್ದಾಗ ಚಾಲಕನ ಕ್ಯಾಬಿನ್ ಸಮೀಪದಿಂದ ಸುಟ್ಟ ವಾಸನೆ ಬರುತ್ತಿರುವುದನ್ನ ಪ್ರಯಾಣಿಕರು ಗಮನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಟ್ಟ ವಾಸನೆ ಬರುತ್ತಿದ್ದಂತೆ ಪ್ರಯಾಣಿಕರು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಪ್ರಯಾಣಿಕರು ಡ್ರೈವರ್ ಮತ್ತು ಕಂಡಕ್ಟರ್‌ಗೆ ವಿಷಯ ತಿಳಿಸಿ, ಪರಿಶೀಲನೆ ಮಾಡುವಂತೆ ಹೇಳಿದ್ದಾರೆ. ಆದ್ರೆ ಚಾಲಕ ನಿರ್ಲಕ್ಷ್ಯ ಮಾಡಿದ್ದಾನೆ. ಸುಟ್ಟ ವಾಸನೆ ಕಾಮನ್, ಅಂತ ಬಸ್ ನಿಲ್ಲದೇ ಮುಂದೆ ಹೋಗಿದ್ದಾನೆ. ಪ್ರಯಾಣಿಕರು ಮತ್ತೊಮ್ಮೆ ಬಸ್ ನಿಲ್ಲಿಸುವಂತೆ ಹೇಳಿದ್ದಕ್ಕೆ ʻʻಸಾಯಬೇಕೆಂದಿದ್ದರೆ ಹೋಗಿ ಸಾಯಿರಿ, ಬಸ್ ಮಾತ್ರ ನಿಲ್ಲಿಸಿಲ್ಲʼʼ ಎಂದು ಚಾಲಕ ಹೇಳಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸ್ಲೀಪರ್ ಬಸ್ ದುರಂತದಲ್ಲಿ 9 ಮಂದಿ ಸಜೀವ ದಹನ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ
‘ಚಾಲಕ, ನಿರ್ವಾಹಕರು ಕ್ಯಾಬಿನ್‌ನಲ್ಲಿ ಬೀಡಿ, ಸಿಗರೇಟ್ ಸೇದುತ್ತಿದ್ದರು’
ಎಫ್‌ಐಆರ್‌ನಲ್ಲಿ ಚಾಲಕ ಮತ್ತು ನಿರ್ವಾಹಕರು ಬಸ್‌ನ ಕ್ಯಾಬಿನ್‌ನಲ್ಲಿ ಬೀಡಿ ಹಾಗೂ ಸಿಗರೇಟ್ ಸೇದುತ್ತಿದ್ದರು ಎಂಬ ಆರೋಪವೂ ಇದೆ. ಚಾಲಕನ ಸೀಟಿನ ಸಮೀಪ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಚಲಿಸುತ್ತಿದ್ದಾಗಲೇ ಸ್ಲೀಪರ್ ಬಸ್‌ನಲ್ಲಿ ಬೆಂಕಿ – 9 ಮಂದಿ ಸಜೀವ ದಹನ

ಬೆಂಕಿ ಹೊತ್ತಿಕೊಂಡ ಬಸ್‌ನಿಂದ ಪ್ರಯಾಣಿಕರ ಪರದಾಟ
ಬೆಂಕಿ ವೇಗವಾಗಿ ಹರಡಿದ ಬಳಿಕ ಬಸ್ ನಿಂತಿದೆ. ಆ ವೇಳೆಗೆ ಚಾಲಕನ ಕ್ಯಾಬಿನ್ ಹಾಗೂ ಪ್ರಯಾಣಿಕರ ಭಾಗದಲ್ಲಿ ದಟ್ಟ ಹೊಗೆ ಆವರಿಸಿತ್ತು. ಹಲವು ಪ್ರಯಾಣಿಕರು ಬಸ್‌ನಿಂದ ಹೊರಬರಲು ಕಿಟಕಿಗಳ ಮೂಲಕ ಜಿಗಿದು ಪಾರಾಗಿದ್ದಾರೆ. ಆದರೆ, ಕೆಲ ಪ್ರಯಾಣಿಕರಿಗೆ ಬಸ್‌ನಿಂದ ಹೊರಬರಲು ಸಾಧ್ಯವಾಗಲಿಲ್ಲ. ಬೆಂಕಿಯಿಂದ ಗಾಯಗೊಂಡ ಹಲವು ಪ್ರಯಾಣಿಕರನ್ನ ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿದ್ದಾಗಲೇ 9 ಪ್ರಯಾಣಿಕರು ಮೃತಪಟ್ಟಿರುವುದಾಗಿ ತಮಗೆ ತಿಳಿಯಿತು ಎಂದು ಸುನೀಲ್ ಕುಮಾರ್ ದೂರಿನಲ್ಲಿ ಹೇಳಿದ್ದಾರೆ.
ಡ್ರೈವರ್, ಕಂಡಕ್ಟರ್ ಅರೆಸ್ಟ್
ಪೊಲೀಸರ ಪ್ರಕಾರ, ಈ ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದು, ಸುಟ್ಟ ಗಾಯಗಳು ಹಾಗೂ ಹೊಗೆಯಿಂದ ಉಂಟಾದ ಉಸಿರುಗಟ್ಟುವಿಕೆ ಸಾವಿಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಮತ್ತು ನಿರ್ವಾಹಕರನ್ನ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

