ಬೆಂಗಳೂರು: ಅತೃಪ್ತ ಶಾಸಕರ ಜೊತೆ ಗುಟ್ಟಾಗಿ ಮಾತಡೋಕೆ ಏನು ಇಲ್ಲ. ರಾಜೀನಾಮೆ ಬಗ್ಗೆ ಮಾತನಾಡಲು, ನನ್ನನ್ನು ಭೇಟಿಯಾಗಲು ಕಚೇರಿಗೆ ಬರಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರಿಗೆ ಭದ್ರತೆ ಬೇಕಾದರೆ ಕೊಡುತ್ತೇನೆ. ಈ ಹಿಂದೆ ಶಾಸಕರ ರಾಜೀನಾಮೆ ವಿಚಾರಕ್ಕೆ ಹಲವು ತಿಂಗಳ ಕಾಲ ಕಳೆದಿರುವ ಉದಾಹರಣೆ ಇದೆ. ಅದರೆ ಒಂದು ವಾರದಲ್ಲಿ ಇವರಿಗೆ ಏಕೆ ಅರ್ಜೆಂಟ್? ಒಂದು ವಾರದ ವಿಳಂಬದಿಂದ ಅರ್ಜೆಂಟ್ ಅಗಬೇಕಿರುವ ಕೆಲಸವಾದರೂ ಏನು? ಜನ ಸಾಮಾನ್ಯರು ಅವರ ಪಾಡಿಗೆ ಇದ್ದಾರಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.
ನಾನು ಕುಟುಂಬದ ಜೊತೆ ಇದ್ದೇನೆ. ಇದು ನನ್ನ ಖಾಸಗಿ ಮನೆ. ಇಲ್ಲಿಗೆ ಯಾರನ್ನೂ ಕರೆದಿಲ್ಲ. ಅತೃಪ್ತ ಶಾಸಕರು ನನ್ನನ್ನು ಕಚೇರಿಗೆ ಬಂದು ಭೇಟಿ ಮಾಡಬೇಕು. ಅಲ್ಲಿಯೇ ನಾನು ಅವರಿಗೆ ಏನು ಕೆಲಸವಾಗಬೇಕೋ ಅದನ್ನ ಮಾಡಿಕೊಡುತ್ತೇನೆ. ಗುಟ್ಟು ವ್ಯವಹಾರ ಏನು ಇಲ್ಲ. ಗುಟ್ಟಾಗಿ ಮಾತನಾಡೋಕೆ, ಭೇಟಿಯಾಗೋಕೆ ಏನಾದರೂ ಡೀಲ್ ನಡೆಯುತ್ತಿದಿಯಾ? ಎಂದು ಪ್ರಶ್ನಿಸಿದರು. ಏನೇ ನಡೆದರು ಕಾನೂನಿನ ಚೌಕಟ್ಟಿನಲ್ಲೇ ನಡೆಯಬೇಕು. ನಾನು ಕಾನೂನು ಉಲ್ಲಂಘನೆ ಮಾಡಲ್ಲ ಎಂದು ಖಡಕ್ ಆಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಬಳಿಕ ಅಧಿವೇಶನದ ಬಗ್ಗೆ ಮಾತನಾಡಿ, ಅಧಿವೇಶನ ಮುಂದೂಡಲು ನಾನು ಅವಕಾಶ ನೀಡಲ್ಲ. ಕಾನೂನಿನಲ್ಲಿ ಅ ರೀತಿ ಅವಕಾಶ ಇಲ್ಲ. ಆ ರೀತಿ ನಿರ್ಧರವನ್ನು ಸಿಎಂ ತೆಗೆದುಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ ಎಂದರು.
ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ. ಇಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿರುವ 10 ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ಹಾಗಾಗಿ ಇಂದು ಎಲ್ಲ ಅತೃಪ್ತ ಶಾಸಕರು ಎಲ್ಲರೂ ಸ್ಪೀಕರ್ ಮುಂದೆ ಹಾಜರಾಗಬೇಕು. ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.