ನವದೆಹಲಿ: ಉಗ್ರರು ಪಾಕಿಸ್ತಾನದಲ್ಲೇ (Pakistan) ಇರಲಿ, ಎಲ್ಲೇ ಇರಲಿ ಅವರಿರುವ ಜಾಗಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S.Jaishankar) ತಿಳಿಸಿದ್ದಾರೆ.
ನೆದರ್ಲ್ಯಾಂಡ್ಸ್ ಮೂಲದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜೈಶಂಕರ್, ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹೆಸರಿಸಲಾದ ಭಯೋತ್ಪಾದಕ ತಾಣಗಳ ಮೇಲೆ ಭಾರತ ದಾಳಿ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಯಮಿತವಾಗಿ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಪ್ರಮುಖ ಭಯೋತ್ಪಾದಕರು, ಅವರ ವಾಸಸ್ಥಳ ಮತ್ತು ಅವರು ಎಲ್ಲಿಂದ ಕಾರ್ಯನಿರ್ವಹಿಸುತ್ತಾರೆ ಎಂಬುದರ ಕುರಿತು ವಿವರಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ – ಓರ್ವ ಯೋಧ ಹುತಾತ್ಮ
ಏಪ್ರಿಲ್ 22 ರಂದು (ಪಹಲ್ಗಾಮ್ ದಾಳಿ) ನಾವು ನೋಡಿದ ರೀತಿಯ ಕೃತ್ಯಗಳು ನಡೆದರೆ, ತಕ್ಕ ಉತ್ತರ ನೀಡುತ್ತಾರೆ. ನಾವು ಭಯೋತ್ಪಾದಕರ ಮೇಲೆ ದಾಳಿ ಮಾಡುತ್ತೇವೆ ಎಂಬ ಸ್ಪಷ್ಟ ಸಂದೇಶ ಆ ಕಾರ್ಯಾಚರಣೆಯಲ್ಲಿ ಇದೆ. ಹೀಗಾಗಿ, ಆಪರೇಷನ್ ಸಿಂಧೂರ ಮುಂದುವರೆದಿದೆ. ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದರೆ, ಅವರು ಇರುವ ಸ್ಥಳದಲ್ಲಿಯೇ ನಾವು ಅವರನ್ನು ಹೊಡೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರದ ಆರ್ಥಿಕತೆಯ ಆಧಾರಸ್ತಂಭವಾಗಿರುವ ಪ್ರವಾಸೋದ್ಯಮಕ್ಕೆ ಹಾನಿ ಮಾಡುವ ಮತ್ತು ಧಾರ್ಮಿಕ ವೈಷಮ್ಯವನ್ನು ಸೃಷ್ಟಿಸುವ ಗುರಿಯನ್ನು ಈ ದಾಳಿ ಹೊಂದಿದೆ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕ್‌ನ ಉಗ್ರವಾದದ ನಿಜ ಬಣ್ಣ ಬಯಲು ಮಾಡಲು ವಿದೇಶಕ್ಕೆ ಹೊರಟ ಸರ್ವಪಕ್ಷಗಳ ನಿಯೋಗ
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷವಾಯಿತು. ಅದು ಏನೆಂದು ನೀವು ಅರ್ಥ ಮಾಡಿಕೊಳ್ಳಬೇಕು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ 26 ಪ್ರವಾಸಿಗರು ಬಲಿಯಾದರು. ಧಾರ್ಮಿಕ ವೈಷಮ್ಯ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಯಿತು. ಅಲ್ಲಿನ ಸೇನಾ ಮುಖ್ಯಸ್ಥರು ಧಾರ್ಮಿಕ ದೃಷ್ಟಿಕೋನದಲ್ಲೇ ನಡೆಸಲ್ಪಡುತ್ತಾರೆ ಎಂದು ಪಾಕ್ ವಿರುದ್ಧ ಕಿಡಿಕಾರಿದ್ದಾರೆ.