ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗಾಗಿ ನಾನು ಚುನಾವಣೆಯಲ್ಲಿ ಬೆಂಬಲಿಸಲು ಬಂದಿದ್ದೇನೆ. ಚಿಕ್ಕಂದಿನಿಂದಲೂ ನನಗೆ ಅವರು ಪರಿಚಯ. ನನ್ನ ಕಷ್ಟ ಕಾಲದಲ್ಲಿ ಅವರು ನನ್ನೊಂದಿಗೆ ನಿಂತಿದ್ದಾರೆ. ಹಾಗಾಗಿ ಬೆಂಬಲ ಸೂಚಿಸುತ್ತಿದ್ದೇನೆ ಎಂದು ನಟ ಕಿಚ್ಚ (Kiccha) ಸುದೀಪ್ (Sudeep) ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದರೆ, ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಅವರು ಅಪ್ಪಿತಪ್ಪಿಯೂ ಹೇಳಿಲ್ಲ. ಹಾಗಾಗಿ ಮಾಧ್ಯಮದವರು ಬಿಜೆಪಿಯನ್ನು ಬೆಂಬಲಿಸುತ್ತಿಲ್ಲವಾ? ಎಂದು ಪ್ರಶ್ನೆ ಮಾಡಿದರು.
ಈ ಕುರಿತು ಸುದೀಪ್ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮೈಕ್ ತಗೆದುಕೊಂಡು, ‘ನನಗೆ ಬೆಂಬಲಿಸುತ್ತಾರೆ ಅಂದರೆ, ಅದು ಬಿಜೆಪಿಗೆ ಬೆಂಬಲಿಸಿದಂತೆ’ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರೂ, ಸುದೀಪ್ ಯಾವುದೇ ಕಾರಣಕ್ಕೂ ಬಿಜೆಪಿ ಎನ್ನುವ ಪದವನ್ನೇ ಬಳಸಲಿಲ್ಲ. ಜಾಣ್ಮೆಯ ನಡೆಯನ್ನು ಈ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು ಸುದೀಪ್. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್
ಬಿಜೆಪಿ ಜೊತೆಗಿನ ಸಂಬಂಧವನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಂದರ್ಭದಲ್ಲಿ ಒಂದು ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದನ್ನು ಅಭಿಮಾನಿಗಳಿಗೆ ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಟಿಕೆಟ್ ಕೇಳುವುದಿಲ್ಲ’ ಎಂದಿದ್ದಾರೆ ಸುದೀಪ್.
ಈ ಕುರಿತಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆರಂಭಿಸಿದ್ದಾರೆ. ನೆಚ್ಚಿನ ನಟ ಈಗಾಗಲೇ ತಮ್ಮದೇ ಟ್ರಸ್ಟ್ ಮೂಲಕ ಸಮಾಜಸೇವೆ ಆರಂಭಿಸಿದ್ದಾರೆ. ರಾಜಕಾರಣಕ್ಕೆ ಹೋದರೆ ಮತ್ತಷ್ಟು ಸಹಾಯ ಮಾಡಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಅವರು ರಾಜಕೀಯ ಕ್ಷೇತ್ರಕ್ಕೆ ಹೋಗುವುದು ಬೇಡ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಬಿಜೆಪಿ ಸೇರುವ ವಿಚಾರ ಮಾತನಾಡಲಿಲ್ಲ. ಪಕ್ಷದ ಪರವಾಗಿ ಪ್ರಚಾರ ಮಾಡುವೆ ಅಂತಾನೂ ಹೇಳಲಿಲ್ಲ. ಬಸವರಾಜ ಬೊಮ್ಮಾಯಿ ಪರವಾಗಿ ನಿಂತುಕೊಳ್ಳುತ್ತೇನೆ ಎಂದಷ್ಟೇ ಹೇಳಿದರು.