ಬಾಗಲಕೋಟೆ: ಆರ್‌ಎಸ್‌ಎಸ್ ಹಾಗೂ ಭಾರತೀಯ ಸಂಸ್ಕೃತಿಯನ್ನು ದೂಷಣೆ ಮಾಡುವವರು ತನ್ನ ತಾಯಿಯ ಶೀಲದ ಮೇಲೆಯೇ ಶಂಕೆ ವ್ಯಕ್ತಪಡಿಸುವ ನೀಚರು ಎಂದು ಆರ್‌ಎಸ್‌ಎಸ್ ಮುಖಂಡ ಹನುಮಂತ ಮಳಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ಆರ್‌ಎಸ್‌ಎಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಎಸ್‌ಎಸ್ ವಿರೋಧಿಸುವವರಿಗೆ ಉತ್ತರ ಕೊಡಲ್ಲ. ನಾಯಿ ಬೊಗಳಿದರೂ ಆನೆ ಹೋಗುತ್ತಿರುತ್ತದೆ. ಆರ್‌ಎಸ್‌ಎಸ್ ಅಣ್ಣ ಬಸವಣ್ಣನ ಸೂತ್ರದ ಮೇಲೆ ನಿಂತಿದೆ. ಅಲ್ಲದೆ ಹಿಂದೂ ಧರ್ಮವೇ ಅಲ್ಲ, ರಾಮನಿಗೆ ಅಸ್ತಿತ್ವನೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಯಾರ ಮನಸ್ಸು ಶಾಂತ ಇರುತ್ತೋ, ಪ್ರಫುಲ್ಲ ಇರುತ್ತೋ ಅವರಿಗೆ ಮಾತ್ರ ನಮ್ಮ ಧರ್ಮದ ಬಗ್ಗೆ ಅರ್ಥ ಆಗುತ್ತದೆ ಎಂದು ಟಾಂಗ್ ಕೊಟ್ಟರು.

ಇದೇ ವೇಳೆ ರಾಮ ಮಂದಿರದ ಬಗ್ಗೆ ಪ್ರತಿಕ್ರಿಯಿಸಿ, ನಾವು ಎಲ್ಲದರಲ್ಲೂ ವಿಜಯ ಸಾಧಿಸುತ್ತಿದ್ದೇವೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದೇವೆ, ಏಕರೂಪ ತೆರಿಗೆ ತಂದಿದ್ದೇವೆ, ಮುಂದೆ ರಾಮ ಮಂದಿರನೂ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
