ಬಾಗಲಕೋಟೆ: ನಾನು ಮುಖ್ಯಮಂತ್ರಿ (Chief Minister) ಆದ್ರೆ ಸಾವಿರ ಜೆಸಿಬಿ (JCB) ಆರ್ಡರ್ ಮಾಡ್ತಿನಿ, ಎಲ್ಲಾ ತಾಲೂಕುಗಳಲ್ಲಿ ತಲಾ 35 ಜೆಸಿಬಿ ಇಡ್ತೀನಿ.ಯಾರೇ ಕ್ವಾಂಯಕ್ ಅಂದ್ರೂ ಅವ್ರ ಮನೆ ಕಲಾಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಗುಳೇದಗುಡ್ಡ ಪಟ್ಟಣದಲ್ಲಿ ಗುಡುಗಿದ್ದಾರೆ.
ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ಯೋಗಿ ಆದಿತ್ಯನಾಥ್ (Yogi Adityanath) ಅವರ ಬುಲ್ಡೋಜರ್ ನಿಯಮ ಜಾರಿಗೆ ತರುವ ಬಗ್ಗೆ ಮಾತನಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ, ನಮ್ಮ ಸರ್ಕಾರ ಇದ್ದಾಗೂ ಹಿಂಗೆ, ಈಗ ಇನ್ನಷ್ಟು ಕೆಟ್ಟು ಹೋಗಿದೆ. ಇದು ಹೋಗಬೇಕು ಅಂದ್ರೆ ಬುಲ್ಡೋಜರ್ಸ್ ತಗೊಂಡು ಬರಬೇಕು ಎಂದರು.
ನಾನೇನಾದ್ರೂ ಮುಖ್ಯಮಂತ್ರಿ ಆದ್ರೆ ಒಂದು ಸಾವಿರ ಜೆಸಿಬಿ ಆರ್ಡರ್ ಮಾಡ್ತೀನಿ. ಎಲ್ಲಾ ತಾಲೂಕುಗಳಲ್ಲಿ ತಲಾ 25 ಜೆಸಿಬಿ ಇಡ್ತೀನಿ, ಯಾರೇ ಒಬ್ರು ಕಿರಿಕ್ ಮಾಡಿದರೆ ಅವರ ಮನೆ ಧ್ವಂಸ ಮಾಡ್ತೀನಿ. ಇಲ್ಲದಿದ್ದರೆ ನಿಯಂತ್ರಣ ಆಗುವುದಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರ ನಾಗಪುರನಲ್ಲಿ ಅಮಾಯಕ ಪೊಲೀಸರ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೊಲೀಸ್ ಕಮಿಷನರ್ ಹಾಗೂ ಡಿಎಸ್‌ಪಿ ಮೇಲೆ ಹಲ್ಲೆ ಮಾಡ್ತಾರೆ ಅಂದರೆ ಅವರಿಗೆ ಎಷ್ಟು ದುರಹಂಕಾರ ಇದೆ. ಇದನ್ನೆಲ್ಲಾ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬರೀ ಮುಖ್ಯಮಂತ್ರಿ ಆಗೋದು ಲೂಟಿ ಮಾಡೋಕೆ ಅಲ್ಲ. ಯೋಗಿ ಆದಿತ್ಯನಾಥ್ ಅವರು ಭ್ರಷ್ಟಾಚಾರ ಮಾಡಿದವರ ಕುಟುಂಬದವರಿಗೆ ಮುಂದೆ ಎಂದೂ ಸರ್ಕಾರಿ ನೌಕರಿ ಸಿಗದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ರೀತಿ ಮಾಡದೇ ಇದ್ದರೆ ನಮ್ಮ ದೇಶ ದೇಶವಾಗಿ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಸ್ಥಿತಿಗತಿ ಬಗ್ಗೆ ಪೊಲೀಸರು ಬಂದು ನಮ್ಮ ಹತ್ರ ಹೇಳುತ್ತಾರೆ. ಏನ್ ಮಾಡೋದು ಸರ್. ಇಂತಹ ಸರ್ಕಾರ ಇದೆ ಎಂದು ಬೇಸರ ಹೊರಹಾಕ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.